ರಾಜ್ಯದಲ್ಲಿ 300 ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ: ಡಾ.ಕೆ.ಸುಧಾಕರ್

Public TV
2 Min Read

– ಬ್ಲ್ಯಾಕ್ ಫಂಗಸ್ ಗೆ ಔಷಧಿ ಪೂರೈಕೆಗೆ ಕ್ರಮ

ಬೆಂಗಳೂರು: ರಾಜ್ಯದಲ್ಲಿ 300 ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಕಂಡುಬಂದಿದ್ದು, ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, 300 ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿ ಬಂದಿದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಇದೆ. 17 ಮೆಡಿಕಲ್ ಕಾಲೇಜುಗಳಲ್ಲಿ ಕೂಡ ವ್ಯವಸ್ಥೆ ಇದೆ. ಆದರೆ ಔಷಧಿ ಸ್ವಲ್ಪ ಕೊರತೆ ಇದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ ಎಂದರು.

ಇಡೀ ದೇಶದಲ್ಲಿ ವರ್ಷಕ್ಕೆ 100-200 ರಷ್ಟು ಜನರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗುತ್ತಿದ್ದರು. ಈಗ ರಾಜ್ಯದಲ್ಲೇ 300 ಕ್ಕೂ ಅಧಿಕ ಸೋಂಕಿತರಿರುವಾಗ ಔಷಧಿ ಕೊರತೆ ಕಂಡುಬರುತ್ತದೆ. ಇದಕ್ಕಾಗಿ ಔಷಧ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. 1 ಸಾವಿರಕ್ಕೂ ಅಧಿಕ ವೈಲ್ ಗಳನ್ನು ಕಳುಹಿಸಿಕೊಡುವ ನಿರೀಕ್ಷೆಯೂ ಇದೆ. ಬ್ಲ್ಯಾಕ್ ಫಂಗಸ್‍ಗೆ 1,150 ವೈಲ್ ಔಷಧಿ ರಾಜ್ಯಕ್ಕೆ ದೊರೆತಿದೆ. 20 ಸಾವಿರ ವೈಲ್ ಗೆ ಬೇಡಿಕೆ ಇಡಲಾಗಿದೆ. ಈ ಸೋಂಕು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಲು ಸಮಿತಿ ರಚಿಸಿದ್ದು, ಈ ಸಮಿತಿ ವರದಿ ನೀಡಿದೆ. ಸ್ಟೀರಾಯಿಡ್ ಜೊತೆಗೆ ಹ್ಯುಮಿಡಿಫೈರ್ ನಲ್ಲಿ ನಲ್ಲಿ ನೀರು ಬಳಕೆ, ಐಸಿಯು ವೆಂಟಿಲೇಟರ್ ಅನ್ನು ಇನ್ನೊಬ್ಬರಿಗೆ ಬಳಸುವಾಗ, ಒಂದೇ ಮಾಸ್ಕ್ ದೀರ್ಘಕಾಲ ಬಳಕೆ, ಟ್ಯೂಬ್, ಹಾಸಿಗೆ ಮೊದಲಾದ ಮೂಲಗಳಿಂದ ಸೋಂಕು ಬರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ತಡಗಟ್ಟುವ ಬಗೆಯನ್ನೂ ಇದರಲ್ಲಿ ತಿಳಿಸಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಕಟ್ಟಡ ನವೀಕರಣ ಕಾಮಗಾರಿ ನಡೆಸಬಾರದು, ಹೊರಗಿನವರು ವಾರ್ಡ್‍ಗೆ ಬರಬಾರದು, ಪ್ರತಿ ಪಾಳಿ ಮುಗಿದ ಮೇಲೆ ಸ್ವಚ್ಛತೆ ಮಾಡಬೇಕು, ಪ್ರತಿ ಉಪಕರಣಗಳನ್ನು ಸ್ವಚ್ಛವಾಗಿಡಬೇಕು ಎಂದು ಸೂಚಿಸಲಾಗಿದೆ ಎಂದರು.

ಕೋವಿಡ್ ನಿಂದ ಗುಣಮುಖರಾದಾಗ ಇ.ಎನ್.ಟಿ ವೈದ್ಯರು ಮತ್ತೆ ತಪಾಸಣೆ ಮಾಡಬೇಕು. 3, 7 ಮತ್ತು 21 ನೇ ದಿನ ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಆಶಾ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ವೇತನ ಪಾವತಿಸಲಾಗಿದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿದ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸಲಾಗುವುದು. 10 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್ ನಮ್ಮ ಬಳಿ ಇದೆ. ಈ ವಸ್ತುಗಳ ಗುಣಮಟ್ಟದ ಬಗೆಗಿನ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *