ಬೆಂಗಳೂರು: 18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆಯನ್ನು ನೀಡದಿರಲು ಸರ್ಕಾರ ಮುಂದಾಗಿದೆ.
ಸಿಎಂ ಯಡಿಯೂರಪ್ಪನವರು ಇಂದು ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ 19 ನಿಯಂತ್ರಣದ ಕುರಿತು ಚರ್ಚೆ ನಡೆಸಿದರು. ಬಳಿಕ ಸದ್ಯಕ್ಕೆ 18 ರಿಂದ 44 ವರ್ಷದ ವಯೊಮಿತಿಯವರಿಗೆ ಲಸಿಕೆ ಹಾಕುವುದನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೇ 14 ರಿಂದ ಮುಂದಿನ ಆದೇಶದವರೆಗೆ ಈ ವಯೋಮಿತಿಯವರಿಗೆ ಲಸಿಕೆ ನೀಡದೇ ಇರಲು ಸರ್ಕಾರ ನಿರ್ಧಾರ ತೆಗದುಕೊಂಡಿದೆ.
ಎರಡನೇ ಡೋಸ್ ಸಿಗದ ಕಾರಣ ಈಗಿರುವ ಲಸಿಕೆಯನ್ನ 45 ವರ್ಷದ ಮೇಲಿನವರಿಗೆ ನೀಡಬೇಕು. 45 ವರ್ಷದವರಿಗೆ ಸೆಕೆಂಡ್ ಡೋಸ್ ಪೂರ್ಣಗೊಂಡ ಬಳಿಕ 18 – 44 ರ ವಯಸ್ಕರರಿಗೆ ಲಸಿಕೆ ಹಾಕುವ ಕಾರ್ಯ ಆರಂಭಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಸೆಕೆಂಡ್ ಡೋಸ್ ವ್ಯಾಕ್ಸಿನ್ ಪಡೆಯುವವರಿಗೆ ಮೊದಲ ಆಧ್ಯತೆ ಕೊಡಬೇಕೆಂದು ಸೂಚಿಸಲಾಯಿತು. ಪ್ರತಿ ಜಿಲ್ಲೆಯ ವ್ಯಾಕ್ಸಿನ್ ಲಭ್ಯತೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇರಬೇಕು, ವ್ಯಾಕ್ಸಿನ್ ಪೂರೈಸುವ ಕಂಪನಿಗಳ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳಲು ಸೂಚಿಸಲಾಯಿತು.
ಆಕ್ಸಿಜನ್ ಮತ್ತು ಐಸಿಯು ಬೆಡ್ ಗಳ ಸಂಖ್ಯೆ ಹೆಚ್ಚಿಸುವತ್ತ ಗಮನ ಹರಿಸಬೇಕು. ಜಿಲ್ಲೆಗಳಲ್ಲಿ ಆಕ್ಸಿಜನ್ ಸಪ್ಲೆ ಚೈನ್‍ನಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು, ಆಕ್ಸಿಜನ್ ಸಿಲಿಂಡರ್ ಲಭ್ಯತೆ ಇದ್ದು ಜಿಲ್ಲೆಗಳಲ್ಲಿ ಕೊರತೆ ಉಂಟಾದರೆ ಕೂಡಲೇ ಬಗೆಹರಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.
ಕೊರೊನಾ ನಿರ್ವಹಣೆ ವಿಚಾರ ನಡೆದ ಸಭೆಯಲ್ಲಿ ಡಿಸಿಎಂ ಅಶ್ವಥನಾರಾಯಣ್, ಸಚಿವರಾದ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ರವಿಕುಮಾರ್ ಭಾಗಿಯಾಗಿದ್ದರು.