ರಾಜ್ಯದಲ್ಲಿ 1 ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ: ಶಾಸಕ ಡಾ.ಅಜಯ್ ಸಿಂಗ್

Public TV
2 Min Read

ಕಲಬುರಗಿ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಸೂಕ್ತ ಸಮಯದಲ್ಲಿ ವೆಂಟಿಲೇಟರ್ ಸಿಗದೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಒಂದು ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಈ ವೆಂಟಿಲೇಟರ್ ಖರೀದಿ ಮಾಡಲಾಗಿದೆ. ಆದರೆ ಸದ್ಯ ಅವುಗಳನ್ನು ಬಳಸಲು ಟೆಕ್ನಿಷಿಯನ್ ಇಲ್ಲದೆ ವೆಂಟಿಲೇಟರ್ ಬಳಕೆ ಆಗುತ್ತಿಲ್ಲ, ಕೂಡಲೇ ಇವುಗಳ ಬಳಕೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ 35,000 ಕೋಟಿ ಏನಾಯ್ತು? ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ

ವ್ಯಾಕ್ಸಿನ್ ಹಾಕುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪಿಎಚ್ ಸಿ ಕೇಂದ್ರಗಳಲ್ಲಿ ವ್ಯಾಕ್ಸಿನ್ ಕೊರತೆಯಿದೆ. ಕೊರೊನಾ ವಿರುದ್ಧ ಹೋರಾಡಬೇಕು ಎಂದರೆ ವ್ಯಾಕ್ಸಿನೇಷನ್ ಆಗಬೇಕೆಂದು ತಜ್ಞರು ಹೇಳಿದ್ದಾರೆ. ಆದರೆ ವ್ಯಾಕ್ಸಿನೇಷನ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಕೊರೊನಾ ಮೂರನೇ ಅಲೆ ಬಗ್ಗೆ ಪೋಷಕರಲ್ಲಿ ಗಾಬರಿ ಹೆಚ್ಚಾಗಿದೆ. ಮೂರನೇ ಅಲೆ ಬಂದೇ ಬರುತ್ತೆ ಇದನ್ನು ಯಾರೂ ತಡೆಯಲು ಆಗುವುದಿಲ್ಲ. ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಮೂರನೇ ಅಲೆ ಬರುವ ಬಗ್ಗೆ ತಜ್ಞರು ಮಾಹಿತಿ ಕೊಟ್ಟಿದ್ದಾರೆ. ಸದ್ಯ ನಮ್ಮ ಬಳಿ ಉಳಿದಿರೋದು ಎರಡು ತಿಂಗಳು ಮಾತ್ರ. ಎರಡು ತಿಂಗಳಲ್ಲಿ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಚಿಕಿತ್ಸೆಗೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಳ್ಳಬೇಕು. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಹಾನಿ ಆಗಲಿದೆ. ಮೊದಲನೇ ಅಲೆಯಲ್ಲಿ ವೃದ್ಧರಿಗೆ, ಎರಡನೇ ಅಲೆಯಲ್ಲಿ ವಯಸ್ಕರಿಗೆ, ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳಿಗೆ ಹಾನಿ ಮಾಡುವ ಸಂಭವವಿದೆ ಎಂದರು.

ರಾಜ್ಯದಲ್ಲಿ 4.5 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ರಾಜ್ಯದ 7 ಜಿಲ್ಲೆಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದಾರೆ. ಅಪೌಷ್ಟಿಕ ಮಕ್ಕಳ ಬಗ್ಗೆ ಸರ್ಕಾರ ಹೆಚ್ಚಿನ ನಿಗಾ ವಹಿಸಬೇಕು ಎಂದು ಅಜಯ್ ಸಿಂಗ್ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *