1 ತಿಂಗಳಿನಿಂದ ನಡೆಯುತ್ತಿದೆ ಬಿಜೆಪಿಯ ಗುಪ್ತ ಸಮೀಕ್ಷೆ- ಪ್ರಶ್ನೆಗಳು ಏನು?

Public TV
2 Min Read

– ಬಿಜೆಪಿ ಹೈಕಮಾಂಡ್‍ನಿಂದ ಸಮೀಕ್ಷೆ
– ರಾಜ್ಯದ 6 ಭಾಗದಲ್ಲಿ ಸರ್ವೇ

ಬೆಂಗಳೂರು: ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಇಲ್ಲ. ಆದರೂ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸದ್ದಿಲ್ಲದೇ ಕಳೆದ 1 ತಿಂಗಳಿನಿಂದ ಸಮೀಕ್ಷೆ ಮಾಡುತ್ತಿದೆ.

ಹೌದು. ಬಿಜೆಪಿ ಹೈಕಮಾಂಡ್ ರಾಜ್ಯವನ್ನು 6 ಭಾಗ ಮಾಡಿ 6 ಜನರ ತಂಡವನ್ನು ಸಮೀಕ್ಷೆ ಮಾಡಲು ಬಿಟ್ಟಿದೆ. ಹಳೇ ಮೈಸೂರು, ಬೆಂಗಳೂರು ನಗರ, ಮಧ್ಯಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಈಗ ಸಮೀಕ್ಷೆ ನಡೆಯುತ್ತಿದೆ.

ಪ್ರಶ್ನಾವಳಿ ಏನು?
ರಾಜ್ಯದಲ್ಲಿ ಯಾವ ಪಕ್ಷಗಳಲ್ಲಿ ಮಾಸ್ ಲೀಡರ್ ಯಾರೆಲ್ಲ ಇದ್ದಾರೆ? ಯಾವ ನಾಯಕರಿಗೆ ಜನ ಹೆಚ್ಚು ಸಂಖ್ಯೆಯಲ್ಲಿ ಸೇರುತ್ತಾರೆ? ಬಿಜೆಪಿಯಲ್ಲಿ ಯಡಿಯೂರಪ್ಪ ಸಹಿತ ಯಾವ ನಾಯಕರ ಪೊಲಿಟಿಕಲ್ ಮೈಲೇಜ್ ಹೇಗಿದೆ? ಯಾವ ಸಮುದಾಯ ಯಾವ ಪಕ್ಷದತ್ತ ಹೆಚ್ಚು ವಾಲಿದೆ ಮತ್ತು ಕಾರಣಗಳೇನು? ಹಾಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಬಗ್ಗೆ ಅಭಿಪ್ರಾಯಗಳೇನು? ಯಡಿಯೂರಪ್ಪನವರ ಬಗ್ಗೆ ಇರುವ ಅಭಿಪ್ರಾಯಗಳೇನು? ರಾಜ್ಯ ಬಿಜೆಪಿ ಸ್ಥಿತಿ ಹೇಗಿದೆ? ನಾಯಕತ್ವ ಹೇಗಿದೆ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಇದನ್ನೂ ಓದಿ: ಅಂದು ಸಿಪಿಎಂ ಮುಖಂಡನಿಂದ ಹೊಟ್ಟೆಗೆ ತುಳಿತ, ಗರ್ಭಪಾತ – ಇಂದು ಕೇರಳ ಬಿಜೆಪಿ ಅಭ್ಯರ್ಥಿ

ಸಮೀಕ್ಷೆ ಯಾಕೆ?
ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಸರ್ಕಾರವಿದೆ. ಇದರ ಜೊತೆ 25 ಮಂದಿ ಲೋಕಸಭಾ ಸದಸ್ಯರೂ ಇದ್ದಾರೆ. ಹೀಗಾಗಿ ರಾಜ್ಯದಲ್ಲಿರುವ ಶಾಸಕ, ಸಂಸದರು, ಇತರ ನಾಯಕರ ಬಗ್ಗೆ ತಿಳಿಯಲು ಸಮೀಕ್ಷೆ ನಡೆಸಲಾಗುತ್ತದೆ. ಇದರ ಜೊತೆಗೆ ಯಾವ ಭಾಗದಲ್ಲಿ ಪಕ್ಷ ದುರ್ಬಲವಾಗಿದೆ? ದುರ್ಬಲವಾಗಿರುವ ಪಕ್ಷವನ್ನು ಮೇಲಕ್ಕೆ ತರಲು ಏನು ಮಾಡಬೇಕೆಂಬ ಪ್ರಶ್ನೆಗೆ ಉತ್ತರ ತಿಳಿಯುವ ನಿಟ್ಟಿನಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ.

ನಡ್ಡಾ ಪ್ರವಾಸಕ್ಕೆ ಮೊದಲೇ ಸಮೀಕ್ಷೆ:
2024ರ ಲೋಕಸಭಾ ಚುನಾವಣೆ ಮೇಲೆ ಈಗಲೇ ಕಣ್ಣಿಟ್ಟಿರುವ ಬಿಜೆಪಿ ಪಕ್ಷ ಸಂಘಟನೆ ಮಾಡಲು ತೊಡಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮುಂದಿನ ತಿಂಗಳಿನಿಂದ 120 ದಿನಗಳ ಕಾಲ ದೇಶಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ.

ಡಿಸೆಂಬರ್ ಮೊದಲ ವಾರದಲ್ಲಿ ಉತ್ತರಾಖಂಡ್‍ದಿಂದ ಜೆ. ಪಿ. ನಡ್ಡಾ ಪ್ರವಾಸ ಆರಂಭಿಸಲಿದ್ದಾರೆ. ಪ್ರತಿಯೊಂದು ರಾಜ್ಯಕ್ಕೂ ಭೇಟಿ ನೀಡಿ, ಎಲ್ಲಾ ಬೂತ್ ಮಟ್ಟದ ಮುಖ್ಯಸ್ಥರೊಂದಿಗೆ ವರ್ಚುಯಲ್ ಸಭೆ ನಡೆಸಲಿದ್ದಾರೆ. ಪ್ರತಿಯೊಂದು ರಾಜ್ಯದ ಜಿಲ್ಲಾ ಮುಖ್ಯಸ್ಥರು ಸೇರಿದಂತೆ ಹಿರಿಯ ಮುಖಂಡರು ಮಾತ್ರವಲ್ಲದೇ, ಪಕ್ಷದ ಶಾಸಕರು ಹಾಗೂ ಸಂಸದರನ್ನು ಭೇಟಿ ಮಾಡಲಿದ್ದಾರೆ. ನಡ್ಡಾ ಪ್ರವಾಸದ ಸಂದರ್ಭದಲ್ಲಿ ಈ ಸಮೀಕ್ಷೆ ನೆರವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *