ರಾಜ್ಯದಲ್ಲಿ ನಾಳೆಯಿಂದ ಕಾಲೇಜ್ ಓಪನ್ – ಡಿಗ್ರಿ, ಪಿಜಿ, ಎಂಜಿನಿಯರಿಂಗ್ ಕ್ಲಾಸ್ ಶುರು

Public TV
2 Min Read

– ಸರ್ಕಾರದ ಮಾರ್ಗಸೂಚಿಗಳೇನು..?

ಬೆಂಗಳೂರು: ಕೊರೊನಾ ವೈರಸ್ ಮಧ್ಯೆ ನಾಳೆಯಿಂದ ಕಾಲೇಜ್ ಓಪನ್ ಆಗಲಿದೆ. ಬರೋಬ್ಬರಿ 8 ತಿಂಗಳ ಬಳಿಕ ಡಿಗ್ರಿ, ಪಿಜಿ, ಡಿಪ್ಲೋಮಾ, ಎಂಜಿನಿಯರಿಂಗ್ ಕಾಲೇಜ್ ಆರಂಭವಾಗಲಿದೆ.

ಕಾಲೇಜ್ ಶುರು ಮಾಡಲು ಸರ್ಕಾರ ಏನು ಸಿದ್ಧತೆ ನಡೆಸಿದೆ?, ಮಾರ್ಗಸೂಚಿ ಏನು ಎಂಬುದರ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ. ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ. ಕಾಲೇಜು ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಕಠಿಣ ನಿಯಮ ಜಾರಿಗೆ ತಂದಿದೆ. ಈಗಾಗಲೇ ಕಾಲೇಜುಗಳಿಗೆ ಮಾರ್ಗಸೂಚಿಗಳ ವಿವರ ಕೂಡ ನೀಡಿದೆ.

ಮಾರ್ಗಸೂಚಿ ಏನು..?
ಕಾಲೇಜ್‍ಗೆ ಕಡ್ಡಾಯವಾಗಿ ಬರುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುವಂತಿಲ್ಲ. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯ ತರಬೇಕು. ಕಾಲೇಜ್‍ಗೆ ಬರೋ 3 ದಿನ ಮೊದಲು ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿಸಬೇಕು. ವಿದ್ಯಾರ್ಥಿಗಳು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಕೂಡ ಟೆಸ್ಟ್ ಮಾಡಿಸಲೇಬೇಕು. ಕೊರೊನಾ ಟೆಸ್ಟ್ ರಿಪೋರ್ಟ್ ಕಾಲೇಜ್‍ನಲ್ಲಿ ತೋರಿಸೋದು ಕಡ್ಡಾಯವಾಗಿದೆ. ಕ್ಯಾಂಪಸ್‍ನಲ್ಲಿ ನಿತ್ಯ ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಕಡ್ಡಾಯ, ಕ್ಯಾಂಪಸ್‍ನಲ್ಲಿ ಕ್ಯಾಂಟೀನ್, ಗ್ರಂಥಾಲಯ ಓಪನ್ ಮಾಡುವಂತಿಲ್ಲ. ಕ್ಯಾಂಪಸ್, ಪ್ರತಿ ಕೊಠಡಿ ಸ್ಯಾನಿಟೈಸ್ ಆಗಲೇಬೇಕು. ಆನ್‍ಲೈನ್, ಆಫ್‍ಲೈನ್ ಎರಡೂ ಮಾದರಿಯಲ್ಲಿ ತರಗತಿ ನಡೆಸಬೇಕು.

ಕಾಲೇಜ್‍ಗೆ ಬರಲು ಆಗದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ನೀಡಬೇಕು. ಹೆಚ್ಚು ವಿದ್ಯಾರ್ಥಿಗಳು ಇದ್ದರೆ ಪಾಳಿ ವ್ಯವಸ್ಥೆಯಲ್ಲಿ ತರಗತಿ ನಡೆಸಬಹುದು. ವಿದ್ಯಾರ್ಥಿಗಳು ಮನೆಯಿಂದಲೇ ಊಟ, ಕುಡಿಯುವ ನೀರನ್ನು ತರಬೇಕು. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ತಿಂಗಳ ಅಧ್ಯಯನ ಸಾಮಗ್ರಿ ನೀಡಬೇಕು. ಹಾಸ್ಟೆಲ್‍ಗಳಲ್ಲಿ ಉಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಡಬೇಕು. ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದೊಂದಿಗೆ ಮ್ಯಾಪಿಂಗ್ ಮಾಡಿಕೊಳ್ಳಬೇಕು. ಪ್ರತಿ ಕಾಲೇಜಿನಲ್ಲಿ ಕೊವಿಡ್ ಕಾರ್ಯಪಡೆ ನೇಮಕ ಮಾಡಬೇಕು (ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ ತನ್ನ ಸಹಪಾಠಿಗಳಲ್ಲೇನಾದರು ಕೋವಿಡ್ ಗೆ ಸಂಬಂಧಿಸಿದ ಲಕ್ಷಗಳನ್ನು ಕಂಡುಬಂದಲ್ಲಿ ಅದನ್ನು ಕೋವಿಡ್ ಕಾರ್ಯಪಡೆ ಗಮನಕ್ಕೆ ತರಬೇಕು).

ಸಾಂಸ್ಕೃತಿಕ ಕಾರ್ಯಕ್ರಮಗಳು ಎನ್‍ಸಿಸಿ, ಎನ್‍ಎಸ್‍ಎಸ್ ಚಟುವಟಿಕೆ ಪ್ರಾರಂಭಿಸುವಂತಿಲ್ಲ. “ಆರೋಗ್ಯ ಸೇತು ಆ್ಯಪ್” ಅನ್ನು ಮೊಬೈಲ್‍ನಲ್ಲಿ ಇನ್‍ಸ್ಟಾಲ್ ಮಾಡಿಸಬೇಕು. ಸಂದರ್ಶಕರು, ಸಾರ್ವಜನಿಕರಿಗೆ ಕಾಲೇಜು ಕ್ಯಾಂಪಸ್ ಪ್ರವೇಶ ನಿಷೇಧ ಮಾಡಬೇಕು. ವಿದ್ಯಾರ್ಥಿಗಳ ಟೆಲಿ ಕೌನ್ಸೆಲಿಂಗ್‍ಗಾಗಿ ಹೆಲ್ಪ್ ಲೈನ್ 84454440632 ಬಳಸಿಕೊಳ್ಳಬೇಕು.

Share This Article
Leave a Comment

Leave a Reply

Your email address will not be published. Required fields are marked *