ರಾಜ್ಯದಲ್ಲಿ ಚಳಿಗಾಲದ ಮಳೆ ಶಾಕ್ – ಉತ್ತರ ಕರ್ನಾಟಕದಲ್ಲಿ ಪ್ರವಾಹದ ಪರಿಸ್ಥಿತಿಗೆ ಜನ ಕಂಗಾಲು

Public TV
1 Min Read

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಚಿಕ್ಕಮಗಳೂರಿನ ರಸ್ತೆಗಳಲ್ಲಿ ನೀರು ಹರಿಯುತ್ತಿದೆ. ಭತ್ತ, ಕಾಫಿ ಬೆಳೆ ನಾಶವಾಗಿವೆ. ಕೊಪ್ಪ ತಾಲೂಕಿನ ಕಾನೂರು ಕಟ್ಟಿನಮನೆ ಗ್ರಾಮದ ಮಹದೇವ್ ಎಂಬವರ ಮನೆ ಮುಂದೆ ಒಣಗಲು ಹಾಕಿದ್ದ ಕಾಫಿ ಬೀಜಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಭಾರೀ ಮಳೆ-ಗಾಳಿಗೆ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ-ಬೆಟ್ಟಗೆರೆ ರಸ್ತೆಯಲ್ಲಿ ವಿದ್ಯುತ್ ಕಂಬ ಧರೆಗುರುಳಿದ್ದು ಜನ ಕತ್ತಲಲ್ಲಿ ಬದುಕುವಂತಾಗಿದೆ.

ಧಾರವಾಡದಲ್ಲಿ ಮಳೆ ನೀರಲ್ಲಿ ಬೈಕ್‍ಗಳು ತೇಲಿ ಹೋಗಿವೆ. ಟೋಲ್ ನಾಕಾ ರಸ್ತೆ ಬಂದ್ ಆಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಈ ರೀತಿ ಆಗುತ್ತಿದೆ ಎಂದು ಮಹಿಳೆಯರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ದಾವಣಗೆರೆಯ ಶಾಮನೂರಿನಲ್ಲಿ ಮನೆಯೊಂದಕ್ಕೆ ಸಿಡಿಲು ಹೊಡೆದಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಆಗಿಲ್ಲ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ನಗರದ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ಕಾಣದೆ ಗುಂಡಿಯೊಳಗೆ ಕಾರು ನುಗ್ಗಿದೆ.

ಚಾಮರಾಜಪೇಟೆಯಲ್ಲಿ ಮಳೆಯಿಂದಾಗಿ 30 ಕ್ಕೂ ಹೆಚ್ಚು ಮಳಿಗೆಗಳಿಗೆ ನೀರು ನುಗ್ಗಿದೆ. ರೇಷನ್ ಅಂಗಡಿ, ಮಸಾಲೆ ಪದಾರ್ಥಗಳ ಅಂಗಡಿ, ಹೋಟೆಲ್‍ಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಶಿವಮೊಗ್ಗದ ಸಾಗರದಲ್ಲಿ ರಸ್ತೆಗಳು ಕೆರೆಯಂತಾಗಿವೆ. ದಾರಿ ಗೊತ್ತಾಗದೇ ಯುಜಿಡಿ ಕಾಮಗಾರಿಗೆ ಅಗೆದಿದ್ದ ಗುಂಡಿಗೆ ಟಿಪ್ಪರ್ ಇಳಿದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ನಡುವೆಯೇ ದೇವರ ಉತ್ಸವ ನಡೆದಿದೆ.

ಗದಗದ ಲಕ್ಷ್ಮೇಶ್ವರದಲ್ಲಿ ವಾಹನಗಳೆಲ್ಲಾ ಮುಳುಗಡೆಯಾಗಿವೆ. ಹುಬ್ಬಳ್ಳಿಯಲ್ಲಿ ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿ ಜನ ಪರದಾಡಿದ್ದಾರೆ. ಹಾವೇರಿಯಲ್ಲಿ ಚಳಿಗಾಲದ ಮಳೆಯಿಂದ ಜೋಳ, ಹತ್ತಿ ಸೇರಿ ವಿವಿಧ ಬೆಳೆಗಳು ಹಾನಿಗೆ ಒಳಗಾಗಿವೆ. ತುಮಕೂರು, ಹಾಸನ, ಮಂಡ್ಯ, ಕೊಡಗು ಜಿಲ್ಲೆಯಲ್ಲಿ ಮಳೆ ಆಗ್ತಿದೆ. ಅಕಾಲಿಕ ಮಳೆಗೆ ರಾಜ್ಯದ ಬಹುತೇಕ ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *