ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿದ್ದು, ವಿರೋಧ ಪಕ್ಷ ಸರ್ಕಾರದ ಜೊತೆ ಕೈ ಜೋಡಿಸಬೇಕು: ಈಶ್ವರಪ್ಪ

Public TV
1 Min Read

ಶಿವಮೊಗ್ಗ: ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಿರೋಧ ಪಕ್ಷ ಕೈಜೋಡಿಸಬೇಕು. ಅಲ್ಲದೆ ರೋಗ ಬರದಂತೆ ತಡೆಗಟ್ಟಲು ಏನು ಮಾಡಬೇಕು ಎಂಬ ದಿಕ್ಕಿನಲ್ಲಿ ಯೋಚಿಸಬೇಕು. ಹಾಗೆಯೇ ಸಲಹೆ ಸೂಚನೆಗಳನ್ನು ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದು ನಿಜ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ತಡೆಗಟ್ಟುವಲ್ಲಿ ಏನೇನು ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತಿವೆ ಎಂದರು.

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಆರೋಗ್ಯ ಇಲಾಖೆ ಕೊರೊನಾ ಕಿಟ್‍ನಲ್ಲಿ ಹಗರಣ ಆಗಿದೆ ಎಂಬುದನ್ನು ಇಷ್ಟು ಹಗುರವಾಗಿ ಹೇಳಿ ಸರಿದುಕೊಳ್ಳಬಾರದು. ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಿರೋಧ ಪಕ್ಷ ಕೈಜೋಡಿಸಬೇಕು. ಭ್ರಷ್ಟಾಚಾರ ಆಗಿದೆ ಅಂತ ಅನ್ನಿಸಿದರೆ ಅಧಿಕಾರಿಗಳು ಬರಲಿ, ದಾಖಲೆ ಕೊಡ್ತೀನಿ ಅನ್ನುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಅವರ ಬಳಿ ದಾಖಲೆ ಇದ್ದರೆ ತಕ್ಷಣ ಬಿಡುಗಡೆ ಮಾಡಲಿ. ಯಾರು ಭ್ರಷ್ಟ ಅಧಿಕಾರಿ ಇದ್ದಾರೆ, ಭ್ರಷ್ಟ ಮಂತ್ರಿ ಇದ್ದಾರೆ ಅವರನ್ನು ರಾಜ್ಯ ಸರ್ಕಾರ ಇಟ್ಟುಕೊಳ್ಳಲ್ಲ. ಆದರೆ ಸುಮ್ಮನೆ ಗಾಳಿಯಲ್ಲಿ ಕಲ್ಲು ಹೊಡೆದಾಗೆ ಮಾಡೋದು ಸರಿಯಲ್ಲ. ಅವರ ಬಳಿ ದಾಖಲೆ ಇದ್ದರೆ ಕೊಡಲಿ ಎಂದು ಸವಾಲೆಸೆದರು.

ಸಿದ್ದರಾಮಯ್ಯ ಅವರ ಪ್ರಯತ್ನನೇ ತಪ್ಪು. ಕೊರೊನಾ ವಿಷಯದಲ್ಲಿ ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ವಿರೋಧ ಪಕ್ಷ ಇದೇ ಎಂದು ತೋರಿಸುವ ಸಲುವಾಗಿ ಕೊರೊನಾ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಆನ್ ಲೈನ್ ಶಿಕ್ಷಣ ಜಾರಿ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಆನ್‍ಲೈನ್ ಶಿಕ್ಷಣ ಬಗ್ಗೆ ಚರ್ಚೆ ಆಗುತ್ತಿದೆ. ಜನರು ಆನ್‍ಲೈನ್ ಶಿಕ್ಷಣ ಬೇಡ ಎನ್ನುತ್ತಿರುವುದು ನಿಜ. ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ಯಾವ ರೀತಿ ಕೊಡಬೇಕು ಎಂಬ ಸ್ಪಷ್ಟತೆ ಬೇಕಲ್ಲ. ಇನ್ನು ಶಿಕ್ಷಣ ಯಾವ ರೀತಿ ಕೊಡಲು ಸಾಧ್ಯ. ಶಿಕ್ಷಣದಿಂದ ಮಕ್ಕಳನ್ನು ವಂಚಿತ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *