– ಶಿವಮೊಗ್ಗೆಯಲ್ಲಿ 10 ಪಾಸಿಟಿವ್ ಪ್ರಕರಣ
ಬೆಂಗಳೂರು: ರಾಜ್ಯ ಸರ್ಕಾರ ಲಾಕ್‍ಡೌನ್ 4.0ದಿಂದ ಇಂದು ಸಾಕಷ್ಟು ರಿಲೀಫ್ ನೀಡಿದೆ. ಆದರೆ ಇತ್ತ ಕೊರೊನಾ ವಿಜೃಂಭಿಸುತ್ತಲೇ ಇದ್ದು, ಒಂದೇ ದಿನ ಇಂದು ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ 109 ಪ್ರಕರಣಗಳು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,256 ಏರಿದ್ದು, ಬೆಂಗಳೂರು, ಮಂಡ್ಯ, ಕಲಬುರಗಿಯಲ್ಲಿ ಇಂದು ಸೋಂಕು ಪೀಡಿತರ ಸಂಖ್ಯೆ ಎರಡಂಕಿಯಲ್ಲಿ ಇದೆ. ವಿಪರ್ಯಾಸ ಎಂದರೇ ಗ್ರೀನ್ ಝೋನ್‍ನಲ್ಲಿದ್ದ ಹಲವರು ಜಿಲ್ಲೆಗಳಿಗೂ ಕೊರೋನಾ ವ್ಯಾಪಿಸಿದೆ. ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕೊರೋನಾ ವಕ್ಕರಿಸಿದೆ. ಮೈಸೂರು ಜಿಲ್ಲೆ ಸಂಪೂರ್ಣ ಕೊರೋನಾ ಮುಕ್ತ ಆಗಿ ಎರಡು ದಿನ ಕಳೆಯುವುದರೊಳಗೆ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಮಡಿಕೇರಿಯಲ್ಲಿ ಕೊರೋನಾ ಪಾಸಿಟೀವ್ ಕೇಸ್ ಕಂಡುಬಂದಿದೆ.
ಇಂದು ಪತ್ತೆಯಾದ ಪ್ರಕರಣಗಳ ಪೈಕಿ 64 ಕೇಸ್‍ಗಳು ಮಹಾರಾಷ್ಟ್ರ ಸೇರಿ ಅಂತರ್ ರಾಜ್ಯ ಪ್ರಯಾಣ ಮಾಡಿ ಬಂದವರಿಗೆ ಸಂಬಂಧಿಸಿದ್ದಾಗಿದೆ. ಉಳಿದ ಪ್ರಕರಣಗಳು ಚೆನ್ನೈ ಲಿಂಕ್ ಹಾಗೂ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಿಂದ ಬಂದಿವೆ. ಇತ್ತ ಶಿವಮೊಗ್ಗದಲ್ಲಿ 10 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 24ಕ್ಕೇರಿದೆ.
ರಾಜ್ಯದಲ್ಲಿ ಇಂದು ಬೆಂಗಳೂರಲ್ಲಿ 24, ಮಂಡ್ಯ 17, ಕಲಬುರಗಿ 10, ಶಿವಮೊಗ್ಗ 10, ಉತ್ತರ ಕನ್ನಡ 9, ರಾಯಚೂರು 6, ವಿಜಯಪುರ, ಯಾದಗಿರಿ, ಗದಗದಲ್ಲಿ ತಲಾ 5, ಹಾಸನ 4, ಕೊಪ್ಪಳ 3, ಬೆಳಗಾವಿ, ದಕ್ಷಿಣ ಕನ್ನಡದಲ್ಲಿ ತಲಾ 2, ಮೈಸೂರು, ಕೊಡಗು, ದಾವಣಗೆರೆ, ಬಳ್ಳಾರಿ, ಉಡುಪಿ, ಬೀದರ್ ಜಿಲ್ಲೆಗಳಲ್ಲಿ ತಲಾ 1 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.