ರಾಜ್ಯದಲ್ಲಿಯೇ ಪ್ರಥಮ ಕೋವಿಡ್ ಪುನರ್ ಚೇತನ ಅಭಿಯಾನ ಕೇಂದ್ರಕ್ಕೆ ಚಾಲನೆ

Public TV
2 Min Read

ಕಲಬುರಗಿ: ರಾಜ್ಯದಲ್ಲಿಯೇ ಪ್ರಥಮ ಭಾರಿ ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಶ್ರೀ ರವಿಶಂಕರ ಗುರೂಜೀ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಯೋಗದೊಂದಿಗೆ ಕೋವಿಡ್ ಪುನರ್ ಚೇತನ ಅಭಿಯಾನ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಲಾಯಿತು.

ನಗರದ ರಾಮ ಮಂದಿರ- ನಾಗನಹಳ್ಳಿ ರಿಂಗ್ ರಸ್ತೆಯಲ್ಲಿರುವ ಕಲಬುರಗಿ ನಾಗರಾಭಿವೃದ್ಧಿ ಪ್ರಾಧಿಕಾರದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಕೋವಿಡನಿಂದ ಗುಣಮುಖರಾದವರಿಗೆ ಶನಿವಾರದಿಂದ ಕೋವಿಡ್ ಪುನರ್ ಚೇತನ ಅಭಿಯಾನ ಕೇಂದ್ರಲ್ಲಿ ನಿರಂತರ ತರಬೇತಿ ನೀಡಲಾಗುತ್ತದೆ. ಶನಿವಾರ ಕೇಂದ್ರಕ್ಕೆ ಕೋವಿಡನಿಂದ ಗುಣಮುಖವಾಗಿ ಆಗಮಿಸಿದ ವ್ಯಕ್ತಿಗಳಿಗೆ ಸರ್ಕಾರದ ವತಿಯಿಂದ ಉಚಿತ ಸ್ವಾಶಕೋಶ ಹೆಚ್ಚಿಸುವ ಕಿಟ್, ಫಲ ಆಹಾರ ಹಾಗೂ ಡ್ರೈ ಫ್ರೂಟ್ಸ್ ನೀಡಲಾಯಿತು ಎಂದು ರಮೇಶ ಜಿ ಸಂಗ ಅವರು ತಿಳಿಸಿದ್ದಾರೆ.

ಪುನರ್ ಚೇತನ ಅಭಿಯಾನ ಕೇಂದ್ರಕ್ಕೆ ಕಲಬುರಗಿ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಕೋವಿಡನಿಂದ ಚೇತರಿಸಿಕೊಂಡ ಬಿಡುಗಡೆಗೊಂಡ ವ್ಯಕ್ತಿಗಳಿಗೆ ಶ್ವಾಸಕೋಶ ಇಮ್ಮಡಿಗೊಳಿಸುವ ತರಬೇತಿ ನೀಡಲಾಗುವುದು. ನಗರದ ಜಿಮ್ಸ್, ಬಸವೇಶ್ವರ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ವಿ.ಎಲ್. ಪಾಟೀಲ್ ಆಸ್ಪತ್ರೆ, ಧನ್ವಂತರಿ ಆಸ್ಪತ್ರೆ ಹಾಗೂ ಚಿರಾಯು ಆಸ್ಪತ್ರೆ ಸೇರಿದಂತೆ ಇನ್ನು ಹಲವಾರು ಆಸ್ಪತ್ರೆಯ ವ್ಯಕ್ತಿಗಳು ಅಭಿಯಾನ ಕೇಂದ್ರದಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.

ಈ ಕೋವಿಡ್ ಪುನರ್ ಚೇತನ ಅಭಿಯಾನ ಕೇಂದ್ರಕ್ಕೆ ಜಿಲ್ಲಾ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಜಿ ಸಂಗ ಅವರು ಉಸ್ತುವಾರಿ ವಹಿಸಲಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪರವಾಗಿ ಡಾ. ಕವಿರಾಜ್ ಎಂ ಅವರು ವಿಶೇಷ ತರಬೇತಿ ನೀಡಲಿದ್ದಾರೆ. ಸರ್ಕಾರ ನಿಯೋಜಸಿರುವ ಡೈಟಿಷಿಯನಗಳಾಗಿ ಡಾ. ರಾಣಿ, ಡಾ. ಸಂಗೀತಾ, ಡಾ. ವಿಜಯ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕರುಗಳಾದ ಗೀತಾ, ವಿಕಾಸ್, ಅಶ್ವಿನಿ, ನಿಂಗರಾಜ್, ಕಿಶೋರ್ ಅವರು ಗುಣಮುಖ ವ್ಯಕ್ತಿಗಳಿಗೆ ತರಬೇತಿ ಶಿಕ್ಷಣ ನೀಡಲಿದ್ದಾರೆ.

ಪುನರ್ ಚೇತನ ಕೇಂದ್ರಕ್ಕೆ ಖರ್ಚು ವೆಚ್ಚವನ್ನು ವಿಪತ್ತು ನಿರ್ವಹಣಾ ನಿಧಿಯಿಂದ ಕಂದಾಯ ಇಲಾಖೆ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಅವರು ಭರಿಸಲಿದ್ದಾರೆ. ಕೇಂದ್ರಕ್ಕೆ ಬೇಕಾದ ಬೆಡ್ ಹಾಗೂ ಹಾಸಿಗೆಗಳನ್ನು ಅಜಿಮ್ ಪ್ರೇಮಜೀ ಫೌಂಡೇಶನ್ ನಿಂದ ಉಚಿತವಾಗಿ ನೀಡಲಾಗಿದೆ. ತರಬೇತಿ ಸಮಯದಲ್ಲಿ 1 ರಿಂದ 2 ಗಂಟೆಗಳ ಕಾಲ ಧ್ಯಾನ, ಯೋಗ ಹಾಗೂ ಕೌಂಸ್ಲಿಂಗ್ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ದಾಖಲಾದವರಿಂದ ಮಾಡಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್ ನ ಕಲಬುರಗಿ ಘಟಕದ ಅಧ್ಯಕ್ಷ ಸ್ವಾಮಿ ಶರಣು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಗೂ ಆರ್ಟ್ ಆಫ್ ಲಿವಿಂಗ್ ನ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *