ರಾಜು ಭಂಡಾರಿ ರಾಜಾವರ್ತ ನಿರ್ದೇಶನದ ಮೊದಲ ಸಿನಿಮಾ ‘ಜೀವ್ನಾನೇ ನಾಟ್ಕ ಸಾಮಿ’

Public TV
1 Min Read

‘ಜೀವ್ನಾನೇ ನಾಟ್ಕ ಸಾಮಿ’.. ಚಂದನವನದಲ್ಲಿ ಬಿಡುಗಡೆಯ ಹೊಸ್ತಿಲಲ್ಲಿರುವ ಸಿನಿಮಾ. ರಾಜು ಭಂಡಾರಿ ರಾಜಾವರ್ತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಇದೇ ತಿಂಗಳ 19ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ನಿರ್ದೇಶಕರ ಮೊದಲ ಸಿನಿಮಾ ಇದಾಗಿದ್ದು, ಟೈಟಲ್ ಎಲ್ಲರ ಗಮನ ಸೆಳೆಯುತ್ತಿದೆ. ಹಲವು ವಿಶೇಷತೆಗಳು ಸಿನಿಮಾದಲ್ಲಿದ್ದು, ಚಿತ್ರದ ತುಣುಕುಗಳು ಕೂಡ ಒಂದಿಲ್ಲೊಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ.

ನಿರ್ದೇಶಕರಾದ ರಾಜು ಭಂಡಾರಿ ರಾಜಾವರ್ತ ರಂಗಭೂಮಿಯ ಪ್ರತಿಭೆ. ಹದಿನೈದು ವರ್ಷಗಳ ರಂಗಭೂಮಿ ನಂಟು ಇಟ್ಟುಕೊಂಡಿರುವ ಇವರು ಲೇಖಕರೂ ಕೂಡ ಹೌದು. ಈಗಾಗಲೇ ಮೂರು ಪುಸ್ತಕಗಳು ಬಿಡುಗಡೆಯಾಗಿ ಓದುಗರ ಮೆಚ್ಚುಗೆ ಗಳಿಸಿಕೊಂಡಿವೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಇವರಿಗೆ ಸಿನಿಮಾ ಕ್ಷೇತ್ರ ಮೊದಲ ಅನುಭವ. ‘ಜೀವ್ನಾನೇ ನಾಟ್ಕ ಸಾಮಿ’ ಚಿತ್ರಕ್ಕೆ ಸ್ವತಃ ತಾವೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಡ್ರಾಮಾ ಜಾನರ್ ಸಬ್ಜೆಕ್ಟ್ ಒಳಗೊಂಡಿರುವ ಈ ಚಿತ್ರದಲ್ಲಿ ರಿಯಾಲಿಟಿ ಶೋ ಆಧರಿಸಿದ ಕಥಾಹಂದರವಿದೆ. ರಿಯಾಲಿಟಿ ಶೋನಲ್ಲಿ ನಡೆಯುವ ಘಟನೆಗಳು ಅಲ್ಲಿರುವ ಪಾತ್ರಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಅನ್ನೋದನ್ನ ಚಿತ್ರದಲ್ಲಿ ಹೇಳಲಾಗಿದೆ ಎನ್ನುವುದು ನಿರ್ದೇಶಕರ ಮಾತು. ಚಿತ್ರದಲ್ಲಿ ಕಿರಣ ರಾಜ್, ಶ್ರೀ ಹರ್ಷ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿಕಾ ರಮ್ಯ, ಪವಿತಾ ಕೊಟ್ಯಾನ್ ನಾಯಕಿಯರಾಗಿ ನಟಿಸಿದ್ದಾರೆ. 2019ರಲ್ಲಿ ಚಿತ್ರೀಕರಣ ಮುಗಿಸಿದ್ದ ಈ ಚಿತ್ರ ಕೊರೊನಾ ಕಾರಣದಿಂದ ಲೇಟಾಗಿ ಚಿತ್ರಮಂದಿರಕ್ಕೆ ಕಾಲಿಡುತ್ತಿದೆ. ಇದನ್ನೂ ಓದಿ: ಜೀವನ ಪಾಠ ಹೇಳಲು ಬರ್ತಿದ್ದಾರೆ ಕನ್ನಡತಿ ಖ್ಯಾತಿಯ ಕಿರಣ್ ರಾಜ್!

ಕಿಟ್ಟಿ ಕೌಶಿಕ್ ಕ್ಯಾಮೆರಾ ವರ್ಕ್, ಅತಿಶಯ ವೇದಾಂತ ಜೈನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಆರ್ಯ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಲಲಿತ ರಾಜಶೇಖರ ಶಿರಹಟ್ಟಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಬಾಲನಟಿ ಯಾಗಿ ಶ್ರಾವ್ಯಾ ಆಚಾರ್ ನಟಿಸಿದ್ದು, ಜೋಕರ್ ಹನುಮಂತು, ದೇವಯ್ಯ, ಮಹದೇವ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಹಲವು ವೇದಿಕೆಗಳಲ್ಲಿ ಈ ಸಿನಿಮಾ ಪ್ರಶಸ್ತಿಗಳನ್ನು ಪಡೆದುಕೊಂಡು ಭರವಸೆ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *