ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾವಣೆ ಹಿಂದೆ ಮೋದಿ ಸೇಡಿನ ರಾಜಕಾರಣ: ಎಸ್. ಮನೋಹರ್

Public TV
1 Min Read

ಬೆಂಗಳೂರು: ಭಾರತದ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ನೀಡಲಾಗುತ್ತಿದ್ದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನಾ ಪ್ರಶಸ್ತಿ ಎಂದು ಮರು ನಾಮಕರಣ ಮಾಡಲಾಗಿದ್ದು ಇಬ್ಬರು ಗಣ್ಯಮಹನೀಯರುಗಳನ್ನು ಅಪಮಾನ ಮಾಡುವ ಸಲುವಾಗಿ ಬದಲಾವಣೆಯನ್ನು ಮಾಡಿ ಪ್ರಧಾನಿ ನರೇಂದ್ರ ಮೋದಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ಕಿಡಿಕಾರಿದ್ದಾರೆ.

ನರೇಂದ್ರ ಮೋದಿರವರ ಆಡಳಿತ ವೈಖರಿ ಖಂಡಿಸಿ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಮನೋಹರ್ ಅವರು, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ರವರು ಮತ್ತು ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ದೇಶಕ್ಕೆ ಅಪೂರ್ವ ಕೊಡುಗೆ ಮತ್ತು ದೇಶಕ್ಕಾಗಿ ಬಲಿದಾನ ಕೊಟ್ಟ ಮಾಜಿ ಪ್ರಧಾನಿ ರಾಜೀವ್ ಗಾಂಧಿರವರು ಸ್ಮರಣೀಯ ಮಹನೀಯರು. ಒಂದು ಪ್ರಶಸ್ತಿಗೆ ಇಟ್ಟ ಹೆಸರನ್ನು ಬದಲಾಯಿಸಿ, ಇನ್ನೂಬ್ಬ ಮಹನೀಯರ ಹೆಸರು ಇಡುವುದು ಇಬ್ಬರಿಗೂ ಅಪಮಾನ ಮಾಡಿದಂತೆ. ನರೇಂದ್ರ ಮೋದಿರವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಗುಜರಾತ್ ನ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಎಂದು ಬದಲಾಯಿಸಿದ್ದು ಮೋದಿಯವರೇನು ಕ್ರಿಕೆಟ್ ಆಟಗಾರರೇ ಎಂಬ ಪ್ರಶ್ನೆ ದೇಶದ ಜನರಿಗೆ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಹೆಸರು ಬದಲಾವಣೆ ಮಾಡುವುದೇ ಜೀವನದ ಏಕೈಕ ಸಾಧನೆ ಎಂದುಕೊಂಡಿರುವ ಮೋದಿಯವರು ಇಂತಹ ಹುಸಿ ಪ್ರಚಾರ ತಂತ್ರಗಳನ್ನು ಬದಿಗೊತ್ತಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಆಹಾರ ಸಾಮಾಗ್ರಿಗಳ ಬೆಲೆಯನ್ನು ತಗ್ಗಿಸಿ ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದರು. ಇದನ್ನೂ ಓದಿ: ರಾಜೀವ್ ಗಾಂಧಿ ಖೇಲ್ ರತ್ನ ಅಲ್ಲ ಇನ್ನು ಮುಂದೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಪ್ರಶಸ್ತಿ

ಈ ವೇಳೆ ಪ್ರಚಾರ ಸಮಿತಿ ಅಧ್ಯಕ್ಷರುಗಳಾದ ಜನಾರ್ದನ್, ಆನಂದ್ ಮತ್ತು ಕೆಪಿಸಿಸಿ ವಕ್ತಾರರಾದ ಸಲೀಂ, ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರುಗಳಾದ ಇ.ಶೇಖರ್, ಪ್ರಕಾಶ್, ಪುಟ್ಟರಾಜು, ಚಂದ್ರಶೇಖರ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *