ರಾಜಸ್ಥಾನದಲ್ಲಿ ಹೈಡ್ರಾಮಾ – 25 ಶಾಸಕರ ಜೊತೆ ದೆಹಲಿ ತಲುಪಿದ ಪೈಲಟ್‌

Public TV
2 Min Read

ಮತ್ತೆ ಆಪರೇಷನ್‌ ಕಮಲ ನಡೆಯುತ್ತಾ?
– ಬಿಜೆಪಿಯಿಂದ ಶಾಸಕರಿಗೆ 25 ಕೋಟಿ ಆಫರ್‌
– ಸಿಎಂ ಗೆಹ್ಲೋಟ್‌ ಗಂಭೀರ ಆರೋಪ

ಜೈಪುರ/ನವದೆಹಲಿ: ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದ್ದು, ಮಧ್ಯಪ್ರದೇಶದಲ್ಲಿ ನಡೆದಂತೆ ಇಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತಾ ಎಂಬ ಪ್ರಶ್ನೆ ಎದ್ದಿದೆ. ಇಲ್ಲಿಯವರೆಗೆ ತೆರೆ ಮರೆಯಲ್ಲಿ ನಡೆಯುತ್ತಿದ್ದ ನಾಯಕರ ನಡುವಿನ ಗುದ್ದಾಟ ಈಗ ಬಹಿರಂಗವಾಗಿದ್ದು ಬಿಕ್ಕಟ್ಟು ಈಗ ದೆಹಲಿ ಹೈಕಮಾಂಡ್‌ ಅಂಗಳಕ್ಕೆ‌ ತಲುಪಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿದ ಬಳಿಕ 69 ವರ್ಷದ  ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು 42 ವರ್ಷದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ ನಡುವೆ ಭಿನ್ನಮತ ಎದ್ದಿತ್ತು. ಆಗ ಹೇಗೂ ಕಾಂಗ್ರೆಸ್‌ ಹೈಕಮಾಂಡ್‌ ಭಿನ್ನಮತವನ್ನು ಶಮನ ಮಾಡಲು ಸಚಿನ್ ಪೈಲಟ್‌ಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ ಸಮಾಧಾನ ಮಾಡಿತ್ತು. ಆದರೆ ಈಗ ಭಿನ್ನಮತ ಮತ್ತಷ್ಟು ಉಲ್ಬಣಗೊಂಡಿದ್ದು ಪೈಲಟ್‌ ಅವರು ತಮ್ಮ ಆಪ್ತ 25 ಶಾಸಕರ ಜೊತೆ ಹೈಕಮಾಂಡ್‌ ಭೇಟಿಯಾಗಲು ದೆಹಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ.

ದಿಢೀರ್‌ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಸಿಎಂ ಗೆಹ್ಲೋಟ್‌ ತನ್ನ ಮಂತ್ರಿಗಳು, ಆಪ್ತ ಶಾಸಕರು ಮತ್ತು ಪಕ್ಷೇತರ ಶಾಸಕರ ಜೊತೆ ಸಭೆ ನಡೆಸಿ ಪತ್ರದ ಮೂಲಕ ಸರ್ಕಾರಕ್ಕೆ ಬೆಂಬಲ ನೀಡುವಂತೆ ಸೂಚಿಸಿದ್ದರು.

ಕಾಂಗ್ರೆಸ್‌ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಿ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಪಡೆಯು (ಎಸ್‌ಒಜಿ) ಪ್ರಕರಣ ದಾಖಲಿಸಿ ಬಂಧಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಪೊಲೀಸರು ಸಚಿನ್ ಪೈಲಟ್‌ಗೆ ನೋಟಿಸ್‌ ಕಳುಹಿಸಿದ್ದರು.

ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಕಾಂಗ್ರೆಸ್‌ ಶಾಸಕರನ್ನು ಖರೀದಿಸಲು ಬಿಜೆಪಿ 25 ಕೋಟಿ ನೀಡುವ ಆಮಿಷ ಒಡ್ಡಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್‌ ಪುನಿಯಾ ಪ್ರತಿಕ್ರಿಯಿಸಿ, ಮಧ್ಯಪ್ರದೇಶದಲ್ಲಿ ಉತ್ತಮ ಆಡಳಿತ ನೀಡಲು ಕಾಂಗ್ರೆಸ್‌ ವಿಫಲವಾಗಿದೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಗೆಹ್ಲೋಟ್‌ ಬಿಜೆಪಿ ವಿರುದ್ಧ ಮಾತನಾಡಿದ್ದಾರೆ. ಸರ್ಕಾರದಲ್ಲಿ ಎಲ್ಲವೂ ಸರಿ ಇದ್ದರೆ ಹೆದರಿಕೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಒಟ್ಟು 200 ವಿಧಾನ ಸಭಾ ಕ್ಷೇತ್ರಗಳ ಪೈಕಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ 100 ಕ್ಷೇತ್ರಗಳನ್ನು ಗೆದ್ದಿದ್ದರೆ ಬಿಜೆಪಿ 72 ಸ್ಥಾನವನ್ನು ಗೆದ್ದಿತ್ತು. ಬಳಿಕ ಬಿಎಸ್‌‌ಪಿಯ 6 ಮಂದಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 13 ಮಂದಿ ಪಕ್ಷೇತರ ಶಾಸಕರ ಪೈಕಿ 12 ಮಂದಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಇತ್ತ ಬಿಜೆಪಿ ಬಳಿ 72 ಶಾಸಕರು ಇದ್ದಾರೆ. ಬಿಜೆಪಿಗೆ ಆರ್‌ಎಲ್‌ಪಿಯ ಒಬ್ಬರು ಮತ್ತು ಪಕ್ಷೇತರ ಶಾಸಕರು ಬೆಂಬಲ ನೀಡಿದ್ದಾರೆ.

ದೆಹಲಿಗೆ ಬಂದಿದ್ದು ಯಾಕೆ?
ಸಚಿನ್‌ ಪೈಲಟ್‌ 25 ಶಾಸಕರೊಂದಿಗೆ ದೆಹಲಿ ತಲುಪಿದ್ದು, ಈಗಾಗಲೇ ಐಟಿಸಿ ಹೋಟೆಲ್‌‌ ಬುಕ್‌ ಮಾಡಲಾಗಿದೆ ಎಂದು ವರದಿಯಾಗಿದೆ. ಶಾಸಕರ ಜೊತೆ ದೆಹಲಿಗೆ ಬಂದಿರುವ ಪೈಲಟ್ ಸರ್ಕಾರವನ್ನು ಉರುಳಿಸಲು ಕರೆದುಕೊಂಡು ಬಂದಿದ್ದಾರಾ ಅಥವಾ ಹೈಕಮಾಂಡ್‌ಗೆ ತನ್ನ ಶಕ್ತಿ ಪ್ರದರ್ಶನ ಮಾಡಿ ಮುಖ್ಯಮಂತ್ರಿ ಪಟ್ಟ ನೀಡಲು ಒತ್ತಡ ಹೇರಲು ಕರೆ ತಂದಿದ್ದಾರಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆದರೆ ಕಮಲ್‌ನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸರ್ಕಾರ ಪತನಗೊಂಡಿತ್ತು. ಜುಲೈನಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲಿ ಸಿಂದಿಯಾ ಬಣದ 12 ಮಂದಿ ಶಾಸಕರಿಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಂತ್ರಿಸ್ಥಾನ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *