ರಾಜಣ್ಣ ಶಿವಣ್ಣನನ್ನು ದೊಡ್ಡ ನೋಟಿನ ಸಾಹುಕಾರ ಎನ್ನುತ್ತಿದ್ದರು: ಜಗ್ಗೇಶ್

Public TV
2 Min Read

– ಶಿವಣ್ಣ ಮುಂದಿನ ಜನ್ಮದಲ್ಲಿ ನನ್ನ ಅಣ್ಣನಾಗಿ ಹುಟ್ಟಲಿ

ಬೆಂಗಳೂರು: ಡಾ. ರಾಜ್‍ಕುಮಾರ್ ಅವರು ತಮ್ಮ ಮಗ ಶಿವರಾಜ್ ಕುಮಾರ್ ಅವರನ್ನು ದೊಡ್ಡ ನೋಟಿನ ಸಾಹುಕಾರು ಎನ್ನುತ್ತಿದ್ದರು ಎಂದು ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.

ಇಂದು ಚಂದನವನದ ಚಿರಯುವಕ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು 58ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 58ನೇ ವಯಸ್ಸಿನಲ್ಲಿ 28ರ ಯುವಕನ್ನು ನಾಚಿಸುವಂತೆ ಕಾಣುವ ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಅಂತಯೇ ಶಿವಣ್ಣನ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಜಗ್ಗೇಶ್ ಮುಂದಿನ ಜನ್ಮದಲ್ಲಿ ಶಿವಣ್ಣ ನನ್ನ ಅಣ್ಣನಾಗಿ ಹುಟ್ಟಲಿ ಎಂದಿದ್ದಾರೆ.

ಶಿವರಾಜ್‍ಕುಮಾರ್ ಅವರ ಹುಟ್ಟುಹಬ್ಬದ ವಿಚಾರವಾಗಿ ಟ್ವೀಟ್ ಮಾಡಿರುವ ಜಗ್ಗೇಶ್, ನಲ್ಮೆಯ ಸಹೋದರ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು. ಕನ್ನಡಿಗರ ರಂಜಿಸುತ್ತಾ ನೂರು ಕಾಲ ಸುಖವಾಗಿ ಬಾಳಿ. ಶುಭದಿನ ಎಂದು ಬರೆದು, ಶಿವಣ್ಣ, ಪುನೀತ್ ರಾಜ್‍ಕುಮಾರ್, ಜಗ್ಗೇಶ್, ಮತ್ತು ಅವರ ಪತ್ನಿ ಪರಿಮಳಾ ಜಗ್ಗೇಶ್ ಇರುವ ಫೋಟೋವನ್ನು ಹಂಚಿಕೊಂಡಿದ್ದರು.

ಜಗ್ಗೇಶ್ ಅವರ ಈ ಟ್ವೀಟ್‍ಗೆ ಕಮೆಂಟ್ ಮಾಡಿರುವ ಅವರು ಅಭಿಮಾನಿಯೋರ್ವ, ಜಗ್ಗಣ್ಣ ನೀವು ದೊಡ್ಡವರಾ? ಶಿವಣ್ಣ ದೊಡ್ಡವರ ಎಂದು ಪ್ರಶ್ನೆ ಮಾಡಿದ್ದ. ಇದಕ್ಕೆ ಉತ್ತರಿಸಿರುವ ಜಗ್ಗೇಶ್, ಶಿವಣ್ಣ ಜುಲೈ 12, 1962ರಲ್ಲಿ ಜನಿಸಿದರೆ, ನಾನು ಮಾರ್ಚ್ 17, 1963ರಲ್ಲಿ ಜನಿಸಿದ್ದೇನೆ. ಶಿವಣ್ಣ ನನಗಿಂತ 8 ತಿಂಗಳು ಹಿರಿಯರು. ನನಗೆ ಇನ್ನೊಂದು ಜನ್ಮ ಇದ್ದರೆ ಶಿವಣ್ಣನೇ ನನಗೆ ಅಣ್ಣನಾಗಿ ಬರಲಿ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ವರನಟ ಡಾ. ರಾಜ್‍ಕುಮಾರ್ ಅವರ ಬಗ್ಗೆ ಮಾತನಾಡಿರುವ ಜಗ್ಗೇಶ್, ನನ್ನ ಬದುಕಲ್ಲಿ ನಾನು ಕಂಡ ಶ್ರೇಷ್ಠ ಮನುಜ ರಾಜಣ್ಣ ಅವರು, ಶಿವರಾಜ್‍ಕುಮಾರ್ ಅವರನ್ನು ದೊಡ್ಡ ನೋಟಿನ ಸಾಹುಕಾರ ಎಂದು ಕರೆಯುತ್ತಿದ್ದರು. ಇದಕ್ಕೆ ಕಾರಣ ಶಿವಣ್ಣ ಹುಟ್ಟಿದ ದಿನ ರಾಜಣ್ಣನಿಗೆ ನಿರ್ಮಾಪಕರೊಬ್ಬರು ಆರು ಸಾವಿರ ಹಣವನ್ನು ಮುಂಗಡವಾಗಿ ನೀಡಿದ್ದರಂತೆ ಎಂದು ಜಗ್ಗೇಶ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ನಟ ಶಿವರಾಜ್ ಕುಮಾರ್ ಕೊರೊನಾ ಕಾರಣದಿಂದಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಿಗೆ ಈ ಹಿಂದೆ ತಿಳಿಸಿದ್ದರು. ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಇದರಲ್ಲಿ ನನ್ನ ಆರೋಗ್ಯಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಕೊರೊನಾ ಪರಿಸ್ಥಿತಿ ಎಲ್ಲ ತಿಳಿಯಾದ ಮೇಲೆ ನಾವೆಲ್ಲರೂ ಭೇಟಿಯಾಗೋಣ ಇದು ನನ್ನ ಪ್ರಾಮಿಸ್ ಎಂದು ಮನವಿ ಮಾಡಿದ್ದರು.

ಅದರಂತೆ ಇಂದು ಶಿವಣ್ಣನ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸರಳವಾಗಿ ಆಚರಿಸುತ್ತಿದ್ದರೆ. ಸಾಮಾಜಿ ಜಾಲತಾಣದ ಮೂಲಕ ಶುಭಕೋರುತ್ತಿದ್ದಾರೆ. ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ಭಜರಂಗಿ-2 ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ನೀರಿಕ್ಷೆಯನ್ನು ಹುಟ್ಟುಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *