ರಾಜಕೀಯ ನಿವೃತ್ತಿ ಬಯಸಿದ್ದ ಅನಂತ ಕುಮಾರ್ ಹೆಗಡೆ- ಸದ್ಯ ಕ್ಷೇತ್ರದ ಜನರಿಗೆ ಅಲಭ್ಯ

Public TV
1 Min Read

ಕಾರವಾರ : ತನ್ನ ಹೇಳಿಕೆಗಳ ಮೂಲಕವೇ ಹೆಸರು ಮಾಡಿದ್ದ ಮಾಜಿ ಕೌಶಲ್ಯಾಭಿವೃದ್ಧಿ ಸಚಿವ, ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಸದ್ಯ ಕ್ಷೇತ್ರದ ಜನರಿಗೆ ಅಲಭ್ಯರಾಗಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಅನಂತ ಕುಮಾರ್ ಹೆಗಡೆಯವರು ಕಳೆದ ಹಲವು ವರ್ಷಗಳಿಂದ ತೀವ್ರವಾದ ಬೆನ್ನು ನೋವು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಗುಣಮುಖರಾಗುವವರೆಗೆ ಕೆಲವು ಕಾಲ ಸಂಸದರು ಸಾರ್ವಜನಿಕ ಕಾರ್ಯಕ್ರಮ ಹಾಗೂ ಭೇಟಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಫೆ.27 ರಂದು ಮಂಗಳೂರಿನಲ್ಲಿ ಮೊಣಕಾಲಿನ ಚಿಕಿತ್ಸೆಗೆ ಒಳಗಾಗಿರುವ ಸಂಸದ ಅನಂತ‌ ಕುಮಾರ್ ಹೆಗಡೆ ಮಂಗಳೂರಿನಿಂದ ದೆಹಲಿಗೆ ತೆರಳಿದ್ದು ,ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಹೇಳಿಕೆಯಲ್ಲಿ ಏನಿದೆ?
ಅನಂತ ಕುಮಾರ್‌ ಹೆಗಡೆಯವರು ಕಳೆದ ಹಲವು ವರ್ಷಗಳಿಂದ ತೀವ್ರವಾದ ಬೆನ್ನು ನೋವು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ತಮ್ಮ ನಿರ್ಧಾರ ವ್ಯಕ್ತಪಡಿಸಿದ್ದರು. ಅದಾಗಿಯೂ ಕಳೆದ ಲೋಕಸಭಾ ಚುನಾವಣೆಯ ನಂತರದಿಂದ ಹೆಚ್ಚಿನ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಂಪರ್ಕದಿಂದ ದೂರವಿರುತ್ತಿದ್ದರು.

ಇತ್ತೀಚೆಗೆ ಕೆಲವು ತಿಂಗಳಿಂದ ಬೆನ್ನು ನೋವು ಮತ್ತು ಕಾಲು ನೋವು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ತಜ್ಞರು ತಕ್ಷಣವೇ ಸೂಕ್ತ ಕಾಲಿನ ಶಸ್ತ್ರ ಚಿಕಿತ್ಸೆಯನ್ನು ನಡೆಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದರು.

ಇದೀಗ ಕೆಲವು ದಿನಗಳ ಹಿಂದೆ ನಡೆಸಿದ ಗಂಭೀರ ಶಸ್ತ್ರ ಚಿಕಿತ್ಸೆಯ ನಂತರ ಸಂಸದರು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗೂ ವೈದ್ಯರು ದೀರ್ಘಾವಧಿಯ ವಿಶ್ರಾಂತಿಯನ್ನು ಪಡೆಯುಲು ಸೂಚಿಸಿರುವ ಹಿನ್ನೆಲೆಯಲ್ಲಿ ಪೂರ್ಣವಾಗಿ ಗುಣಮುಖರಾಗುವವರೆಗೆ ಕೆಲವು ಕಾಲ ಸಂಸದರು ಸಾರ್ವಜನಿಕ ಕಾರ್ಯಕ್ರಮ ಹಾಗೂ ಭೇಟಿಗೆ ಲಭ್ಯವಿರುವುದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *