ರಸ್ತೆ ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ- KSRTC ಕಚೇರಿ ವಸ್ತುಗಳು ಜಪ್ತಿ

Public TV
1 Min Read

ಗದಗ: ಅಪಘಾತದಿಂದ ಮೃತಪಟ್ಟಿದ್ದ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಕ್ಕೆ ವಾಯುವ್ಯ ಸಾರಿಗೆ ವಿಭಾಗೀಯ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಮುಳಗುಂದ ನಾಕಾ ಬಳಿ ಇರುವ ವಾಯುವ್ಯ ಸಾರಿಗೆ ವಿಭಾಗೀಯ ಕಚೇರಿಯಲ್ಲಿನ ಕಂಪ್ಯೂಟರ್, ಮಾನಿಟರ್, ಸಿಪಿಯು ಸೇರಿದಂತೆ ಹಲವಾರು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಪಾಟೀಲ್ ಅವರ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.

ಏನಿದು ಪ್ರಕರಣ?
2009ರಲ್ಲಿ ಗದಗನ ಹೊರವಲಯದ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿ ರಸ್ತೆ ಅಪಘಾತ ನಡೆದಿತ್ತು. ಈ ಘಟನೆಯಲ್ಲಿ ಪಾದಾಚಾರಿ ಬೆಟಗೇರಿ ನಿವಾಸಿ ಬಾಲಕ ಸಂಕಪ್ಪ ಶಿವಾನಂದ ಆಲೂರ (15) ಸ್ಥಳದಲ್ಲಿಯೇ ಮೃತಪಟ್ಟಿದ್ದ. ಹುಬ್ಬಳ್ಳಿ-ಬಾಗಲಕೋಟೆ ಬಸ್ ಹರಿದು ಸ್ಥಳದಲ್ಲಿ ಸಂಕಪ್ಪನ ಸಾವು ಸಂಭವಿಸಿತ್ತು. ಪರಿಹಾರಕ್ಕೆ ಆಗ್ರಹಿಸಿ 2009 ರಲ್ಲಿ ಮೃತ ಬಾಲಕನ ಕುಟುಂಬಸ್ಥರು ನ್ಯಾಯಾಲಯದ ಮೊರೆಹೋಗಿದ್ದರು.

ಪ್ರಕರಣದ ಕುರಿತು ಆದೇಶ ನೀಡಿದ್ದ ನ್ಯಾಯಾಲಯ ಗದಗ ಘಟಕದಿಂದ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸಾರಿಗೆ ಇಲಾಖೆಯವರು 2014ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ 2019ರಲ್ಲಿ ಒಟ್ಟು 8 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆಗ 5 ಲಕ್ಷ ಪರಿಹಾರ ನೀಡಲಾಗಿತ್ತು. ಉಳಿದ 3.16 ಲಕ್ಷ ರೂ. ಪರಿಹಾರ ನೀಡಿರಲಿಲ್ಲ. ಕಾರಣ ಈಗ ಇಲಾಖೆಯ ವಸ್ತುಗಳ ಜಪ್ತಿಗೆ ಕೋರ್ಟ್ ಆದೇಶ ನೀಡಿದೆ. ಅರ್ಜಿದಾರರ ಪರ ವಕೀಲ ಅಶೋಕ್ ಹೊಸೂರ ನೇತೃತ್ವದಲ್ಲಿ ಜಪ್ತಿ ಕಾರ್ಯ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *