ರಸ್ತೆ ಅಪಘಾತದಿಂದ 20 ಸಾವಿರಕ್ಕೂ ಅಧಿಕ ಜನರನ್ನು ಉಳಿಸಿದ ಕೊರೊನಾ

Public TV
1 Min Read

ನವದೆಹಲಿ: ಕೋವಿಡ್‌ 19 ಕಹಿ ಸುದ್ದಿಗಳ ನಡುವೆ ಸಿಹಿ ಸುದ್ದಿ ಸಿಕ್ಕಿದೆ. ಕೊರೊನಾ ವೈರಸ್‌ ರಸ್ತೆ ಅಪಘಾತಗಳಿಂದ 20 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದೆ.

ಲಾಕ್‌ಡೌನ್‌ ಮತ್ತು ನಂತರದ ದಿನಗಳಲ್ಲಿ ದೇಶದಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ. ಪರಿಣಾಮ ಅಪಘಾತಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ರಸ್ತೆ ಸುರಕ್ಷಿತೆ ಕುರಿತು ಸುಪ್ರೀಂ ಕೋರ್ಟ್‌ ಸಮಿತಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಏಪ್ರಿಲ್‌ ಮತ್ತು ಜೂನ್‌ ತಿಂಗಳ ಮಧ್ಯೆ ನಡೆದ ಅಪಘಾತಗಳ ಮಾಹಿತಿಯನ್ನು ನೀಡಿವೆ.

ಕಳೆದ ವರ್ಷ ಏಪ್ರಿಲ್‌ ಮತ್ತು ಜೂನ್‌ ನಡುವೆ 41,032 ಮಂದಿ ಅಪಘಾತಕ್ಕೆ ಬಲಿಯಾಗಿದ್ದರು. ಆದರೆ ಈ ವರ್ಷ ಈ ಅವಧಿಯಲ್ಲಿ 20,732 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೃತರ ಸಂಖ್ಯೆ ಶೇ.49.47ರಷ್ಟು ಇಳಿಕೆಯಾಗಿದೆ.

ಈ ಅವಧಿಯಲ್ಲಿ 60,118 ರಸ್ತೆ ಅಪಘಾತಗಳು ಸಂಭವಿಸಿದರೆ ಕಳೆದ ವರ್ಷ1,23,150 ಅಪಘಾತಗಳು ಸಂಭವಿಸಿತ್ತು. ಕಳೆದ ವರ್ಷ ಏಪ್ರಿಲ್‌ -ಜೂನ್‌ ಅವಧಿಯಲ್ಲಿ 1,27,157 ಮಂದಿ ರಸ್ತೆ ಅಪಘಾತದಿಂದ ಗಾಯಗೊಂಡರೆ ಈ ವರ್ಷ 57,755 ಮಂದಿ ಗಾಯಗೊಂಡಿದ್ದಾರೆ.

 

ಅಪಘಾತ ಕಡಿಮೆಯಾಗಲು ರಸ್ತೆ ಸುರಕ್ಷಾ ತಜ್ಞರು ಎರಡು ಕಾರಣ ನೀಡುತ್ತಿದ್ದಾರೆ. ಒಂದು ಕೋವಿಡ್‌ 19ನಿಂದಾಗಿ ಗಣನೀಯ ಪ್ರಮಾಣದಲ್ಲಿ ವಾಹನಗಳು ರಸ್ತೆಗೆ ಇಳಿಯದಿರುವುದು ಇನ್ನೊಂದು ಭಾರೀ ದಂಡ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಅಪಘಾತ ತಗ್ಗಿದೆ ಎಂದು ಹೇಳುತ್ತಾರೆ.

ಭಾರತದಲ್ಲಿ ರಸ್ತೆ ಗುಣಮಟ್ಟ ಸುಧಾರಣೆ ಮತ್ತು ಅಪಘಾತ ಕಡಿಮೆ ಮಾಡಲು ಪ್ರತಿ ಮೂರು ಮೂರು ತಿಂಗಳಿಗೊಮ್ಮೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಸ್ತೆ ಅಪಘಾತಗಳ ವರದಿಯನ್ನು ಸುಪ್ರೀಂ ಕೋರ್ಟ್ ಸಮಿತಿಗೆ ಸಲ್ಲಿಸಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *