– ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ
ಬೆಂಗಳೂರು/ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಊರಿಗೆ ಊರುಗಳೇ ನೀರಿನಲ್ಲಿ ಮುಳುಗಡೆ ಆಗಿದೆ. ರಸ್ತೆ, ಸೇತುವೆ ಜಮೀನುಗಳೆಲ್ಲ ಜಲಾವೃತವಾಗಿದೆ. ಬೆಳಗಾವಿಯಲ್ಲಂತೂ ಅಕ್ಷರಶಃ ಜಲತಾಂಡವವೇ ಆಡ್ತಿದೆ. ಮಾರ್ಕೆಂಡೇಯ, ಹಿರಣ್ಯಕೇಶಿ, ಘಟಪಭಾ ನದಿಗಳ ಅಬ್ಬರಕ್ಕೆ ಗೋಕಾಕ್ ನಗರ ನಡುಗಡ್ಡೆ ಆಗಿದೆ. ಗೋಕಾಕ್‍ನ ಮಟನ್ ಮಾರ್ಕೆಟ್ ಬಳಿ ಪ್ರವಾಹದಲ್ಲಿ ಸಿಲುಕಿದ್ದ ಒಟ್ಟು 12 ಮಂದಿಯನ್ನು ರಕ್ಷಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‍ಡಿಆರ್‍ಎಫ್) ತಂಡದ ರಕ್ಷಣಾ ಕಾರ್ಯವೇ ರಣರೋಚಕವಾಗಿದೆ. ಇದು ಪಬ್ಲಿಕ್ ಟಿವಿ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿಕ್ಕೋಡಿಯ ಹುಕ್ಕೇರಿ ತಾಲೂಕಿನ ಬಡಕುಂದ್ರಿಯಲ್ಲಿ ಹಿರಣ್ಯಕೇಶಿ ನದಿ ಪ್ರವಾಹಕ್ಕೆ 89 ಹೆಚ್ಚು ಮನೆಗಳು ಮುಳುಗಡೆ ಆಗಿವೆ. ಮನೆಗಳ ಛಾವಣಿವರೆಗೂ ನೀರು ನಿಂತಿದೆ. 89 ಕುಟುಂಬಗಳಿಗೆ ಬಡಕುಂದ್ರಿ ಗ್ರಾಮದ ಶಾಲೆಯಲ್ಲಿ ಕಾಳಜಿ ಕೇಂದ್ರ ನಿರ್ಮಿಸಲಾಗಿದೆ. ಅಲ್ಲದೇ ಗ್ರಾಮದ ಸುಪ್ರಸಿದ್ಧ ಹೊಳೆಮ್ಮ ದೇವಸ್ಥಾನ ಸಂಪೂರ್ಣ ಮುಳುಗಡೆ ಆಗಿದೆ.
ಚಿಕ್ಕೋಡಿ ತಾಲೂಕಿನ ಯಡೂರು ವೀರಭದ್ರೇಶ್ವರ ದೇವಾಲಯ ಸಹ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹೀರಣ್ಯಕೇಶಿ ನದಿ ನೀರಿನ ನಡುಗಡ್ಡೆಯಲ್ಲಿ ಸಿಲುಕಿ ಆಹಾರ ಇಲ್ಲದೇ ಮಂಗಗಳ ಪರದಾಡುತ್ತಿವೆ. ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಹೀರಣ್ಯಕೇಶಿ ನದಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಮಂಗಗಳು ಸಿಲುಕಿಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಮೇಲೆ ಪ್ರಕೃತಿ ಮುನಿಸಿಕೊಂಡಂತಿದೆ. ಕದ್ರಾ ಜಲಾಶಯದಿಂದ ಕಾಳಿ ನದಿಗೆ 1ಲಕ್ಷ 58 ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗ್ತಿದೆ. ಇದ್ರಿಂದ ಕಾರವಾರ ತಾಲೂಕಿನ ಸಿದ್ದರ, ಕಿನ್ನರ, ಖಾರ್ಗಾ, ವೈಲವಾಡ ಗ್ರಾಮಗಳು ಮುಳುಗಡೆ ಆಗಿದೆ. ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಗುಡ್ಡ ಕುಸಿತಗೊಂಡಿದೆ. ಇದರಿಂದ ಅಡಿಕೆ ತೋಟಗಳೆಲ್ಲ ಸಂಪೂರ್ಣ ನೆಲಸಮವಾಗಿದೆ. ಅಲ್ಲದೇ ಕದ್ರಾ ವ್ಯಾಪ್ತಿಯಲ್ಲಿರುವ 12 ಮನೆಗಳು ನೆಲಸಮವಾಗಿದೆ.
ಮಲೆನಾಡು ಭಾಗದಲ್ಲಿ ಮಳೆ ಆಗ್ತಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ವರದಾ, ಕುಮುದ್ವತಿ, ತುಂಗಭದ್ರಾ, ಧರ್ಮಾ ನದಿಗಳು ಉಕ್ಕಿ ಹರಿಯತ್ತಿದೆ. ಇದ್ರಿಂದ ರಟ್ಟೀಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ, ಕುಡುಪಲಿ, ಎಲಿವಾಳ, ಬಡಸಂಗಾಪುರ, ಯಡಗೋಡ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಮಹಾ ಮಳೆಗೆ ಕಲಬುರಗಿ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಹೊಸಹಳ್ಳಿ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಧವಸ ಧಾನ್ಯಗಳು ನೀರುಪಾಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಪ್ರವಾಹ. ತುಂಗಾ ಡ್ಯಾಂನಿಂದ ತುಂಗಾ ನದಿಗೆ 78 ಸಾವಿರ ಕ್ಯೂಸೆಕ್ ನೀರು ಬಿಡಲಾಗ್ತಿದೆ. ಶಿವಮೊಗ್ಗ ನಗರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸೀಗೆಹಟ್ಟಿ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್ ಮತ್ತು ಇಮಾಮ್ ಬಾಡಾ ಬಡಾವಣೆ ಜಲಾವೃತಗೊಂಡಿದೆ.
ಮಡಿಕೇರಿ, ಶಿವಮೊಗ್ಗ, ಯಾದಗಿರಿ, ಬಾಗಲಕೋಟೆ, ದಾವಣಗೆರೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಮುಂಗಾರು ಜಲತಾಂಡವಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.