ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್

Public TV
2 Min Read

– ಖೈದಿಗಳ ರಿಜಿಸ್ಟರ್ ನಲ್ಲಿ ರಕ್ಷಿತ್ ಶೆಟ್ಟಿ ಹೆಸರು

ಬೆಂಗಳೂರು: ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ರಕ್ಷಿತ್ ಶೆಟ್ಟಿ, ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಸ್ಯಾಂಡಲ್‍ವುಡ್‍ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಳ ಮೇಲೆ ಸರ್ಪ್ರೈಸ್ ಬರುತ್ತಿವೆ. ಒಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ ಮಾಡುತ್ತಿದ್ದರೆ, ಇನ್ನೊಂದೆಡೆ ಅವರ ಸಿನಿಮಾ ತಂಡಗಳಿಂದ ಅಭಿಮಾನಿಗಳಿಗೆ ಉಡುಗೊರೆ ನೀಡುತ್ತಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಲಾಗುತ್ತಿಲ್ಲ. ಮನೆಯವರೊಂದಿಗೆ ಕೇಕ್ ಕತ್ತರಿಸಿ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ. ಆದರೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಿನಿಮಾ ತಂಡಗಳು ಸಹ ರಕ್ಷಿತ್ ಶೆಟ್ಟಿ ಸರ್ಪೈಸ್ ನೀಡುತ್ತಿವೆ. ಒಂದೆಡೆ ಖೈದಿಗಳ ರಿಜಿಸ್ಟರ್ ನಲ್ಲಿ ಸಿಂಪಲ್ ಸ್ಟಾರ್ ಹೆಸರಿದ್ದರೆ, ಇನ್ನೊಂದೆಡೆ ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್ ಎಂದು ಹೇಳುತ್ತಿದ್ದಾರೆ.

ಪುಷ್ಕರ್ ಫಿಲಮ್ಸ್‍ನಿಂದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮತ್ತೊಂದೆಡೆ ಅವರದ್ದೇ ತಂಡ ಪರಂವಃ ಸ್ಟುಡಿಯೋಸ್ ‘777 ಚಾರ್ಲಿ’ ಸಿನಿಮಾದ ವಿಡಿಯೋ ತುಣಕನ್ನು ಬಿಡುಗಡೆ ಮಾಡಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರನ್ನು ಖೈದಿ ರಿಜಿಸ್ಟರ್ ನಲ್ಲಿ ತೋರಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇನ್ನು 777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯನ್ನು ಧರ್ಮನ ಪಾತ್ರದಲ್ಲಿ ಪರಿಚಯಿಸಿದ್ದು, ನಾಯಿಯನ್ನು ಚಾರ್ಲಿ ಎಂದು ಪರಿಚಯಿಸಿದ್ದಾರೆ. ಇವರಿಬ್ಬರ ಕಾಂಬಿನೇಶನ್ ಕುರಿತು ಈ ವಿಡಿಯೋದಲ್ಲಿ ಕುತೂಹಲ ಮೂಡಿಸಲಾಗಿದೆ.

777 ಚಾರ್ಲಿ ಸಿನಿಮಾದಲ್ಲಿ ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್ ಎಂಬುದನ್ನು ಹೆಚ್ಚು ತೋರಿಸಲಾಗಿದ್ದು, ನಾಯಿ ಚಾರ್ಲಿಯ ತರ್ಲೆ ಹಾಗೂ ಕೂಗಾಟ, ಹಾರಾಟವನ್ನು ತೋರಿಸಲಾಗಿದೆ. ಈ ಎರಡು ಚಿತ್ರಗಳ ಮಧ್ಯೆ ರಕ್ಷಿತ್ ಶೆಟ್ಟಿ ತಾವೇ ನಿರ್ದೇಶಿಸಲು ಕಥೆ ಹೆಣೆಯುತ್ತಿದ್ದು, ಪುಣ್ಯಕೋಟಿ ಸ್ಕ್ರಿಪ್ಟ್ ಬರೆಯುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹೀಗೆ ಲಾಕ್‍ಡೌನ್ ಸಮಯವನ್ನು ಸಹ ಸಿನಿಮಾಗಾಗಿಯೇ ಮಿಸಲಿಟ್ಟಿದ್ದಾರೆ.

ಅವನೇ ಶ್ರೀಮನ್ನಾರಾಯಣ ಬಳಿಕ ರಕ್ಷಿತ್ ಶೆಟ್ಟಿ ಹೊಸ ಪ್ರಾಜೆಕ್ಟ್‍ಗಳತ್ತ ಗಮನಹರಿಸಿದ್ದು, ಪ್ರಸ್ತುತ 777 ಚಾರ್ಲಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಶೂಟಿಂಗ್ ಪ್ರಾರಂಭಿಸಬೇಕಿದೆ. ಅಲ್ಲದೆ ತಾವೇ ನಿರ್ದೇಶಿಸಲು ಉದ್ದೇಶಿಸಿರುವ ಪುಣ್ಯಕೋಟಿ ಚಿತ್ರದ ಕಥೆಯನ್ನು ಸಹ ಬರೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *