ರಕ್ಕಸ ಅಲೆಗಳಿಗೆ ಸುಂದರ ಪಡುಬಿದ್ರೆ ಬೀಚ್‌ ನಾಶ – ನೀರಿನಲ್ಲಿ ಕೊಚ್ಚಿ ಹೋಯ್ತು ಕೋಟ್ಯಂತರ ರೂ.

Public TV
1 Min Read

ಉಡುಪಿ: ಅರಬ್ಬೀ ಸಮುದ್ರ ಉಡುಪಿಯ ಪಡುಬಿದ್ರೆ ಸುಂದರ ಬೀಚ್‌ ಪ್ರದೇಶವನ್ನೇ ನಾಶ ಮಾಡಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೀಚನ್ನು ಸಮುದ್ರದ ಭೀಕರ ಅಲೆಗಳು ಕೊಚ್ಚಿಕೊಂಡು ಮುನ್ನುಗ್ಗುತ್ತಿದೆ. ಸಮುದ್ರ ದಡದಲ್ಲಿದ್ದ ಎಲ್ಲವನ್ನೂ ಆಪೋಷಣ ಪಡೆಯುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಅರಬ್ಬಿ ಸಮುದ್ರದ ಅಬ್ಬರ ಜಾಸ್ತಿಯಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಕಡಲ್ಕೊರೆತ ಕಾಣಿಸಿಕೊಳ್ಳುತ್ತಿದೆ. ಕಾಪು ತಾಲೂಕಿನ ಪಡುಕರೆಯಲ್ಲಿ ಗುರುವಾರ ಸಮುದ್ರದ ನೀರು ಮೀನುಗಾರಿಕಾ ರಸ್ತೆಗೆ ಅಪ್ಪಳಿಸಿತ್ತು. ನದಿ ಮತ್ತು ಸಮುದ್ರದ ಮಧ್ಯಭಾಗದಲ್ಲಿರುವ ಮನೆಗಳಲ್ಲಿ ಸಮುದ್ರದ ನೀರು ನುಗ್ಗಿತ್ತು. ಇದೀಗ ಸುಂದರವಾದ ಪಡುಬಿದ್ರಿ ಬೀಚನ್ನು ಬೃಹತ್ ಗಾತ್ರದ ಅಲೆಗಳು ನಾಶ ಮಾಡಿವೆ.

ಭೂಮಿಯನ್ನು ಸೀಳುತ್ತಾ ನುಗ್ಗುತ್ತಿರುವ ಅರಬ್ಬೀ ಸಮುದ್ರ, ತೆಂಗಿನ ಮರಗಳನ್ನು ಭೂಭಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಬೀಚಿನಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳನ್ನು ಕಡಲಿನ ಅಲೆಗಳು ಉರುಳಿಸಿದೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಆಡಳಿತ ಸಂಸ್ಥೆ ಪಡುಬಿದ್ರೆ ಬೀಚ್ ನಲ್ಲಿ ಅಳವಡಿಸಲಾಗಿದ್ದ ಕಾಂಕ್ರೀಟ್ ಇಂಟರ್ಲಾಕ್, ಕಾಂಕ್ರೀಟ್ ಕಟ್ಟೆಗಳನ್ನು ನಿರ್ಮಿಸಿತ್ತು. ಈಗ ಅಲೆಗಳ ಹೊಡೆತಕ್ಕೆ ಇವುಗಳೆಲ್ಲ ಹಾಳಾಗಿವೆ.

ಈ ಬಗ್ಗೆ ಸ್ಥಳೀಯ ನಿವಾಸಿ ಎರ್ಮಾಳು ಸುರೇಶ್ ಮಾತನಾಡಿ, ಪಡುಬಿದ್ರೆಯಲ್ಲಿ ಪ್ರತಿವರ್ಷ ಕಡಲ್ಕೊರೆತ ಆಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ. ಪಡುಬಿದ್ರೆಯಲ್ಲಿ ಆದಂತಹ ಕಡಲ್ಕೊರೆತ ಬಹಳ ನಿರೀಕ್ಷಿತ. ಸಮುದ್ರದ ತೀರದಲ್ಲಿ ಕಾಮಗಾರಿ ನಡೆಸಲಾಗಿದೆ. ಪ್ರತಿ ಮಳೆಗಾಲದಲ್ಲಿ ಸಮುದ್ರ ಮುಂದೆ ಬರುತ್ತದೆ. ಕಾಮಗಾರಿ ನಿರ್ಮಾಣ ಸಂದರ್ಭ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಅವರ ಮಾತಿಗೆ ಅಧಿಕಾರಿಗಳು ಬೆಲೆ ಕೊಟ್ಟಿಲ್ಲ. ಪಡುಬಿದ್ರೆಯಲ್ಲಿ ಶಾಶ್ವತವಾದ ತಡೆಗೋಡೆ ನಿರ್ಮಾಣ ಆಗದಿದ್ದರೆ ಪ್ರತಿವರ್ಷ ಸಚಿವರು ಭೇಟಿ ಕೊಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *