ರಂಗೇರಿದ ಆರ್.ಆರ್.ನಗರ- ಮೂರು ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Public TV
2 Min Read

– ಯಾರಿಗೆ ಒಲಿಯುತ್ತಾಳೆ ರಾಜ ರಾಜೇಶ್ವರಿ?

ಬೆಂಗಳೂರು: ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರುತ್ತಿದೆ. ಇಂದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಿಂದ ಕುಸುಮಾ ಹನುಮಂತರಾಯಪ್ಪ, ಬಿಜೆಪಿಯಿಂದ ಮುನಿರತ್ನ ಮತ್ತು ಜೆಡಿಎಸ್ ನಿಂದ ಕೃಷ್ಣಮೂರ್ತಿ ಬೈ ಎಲೆಕ್ಷನ್ ಅಖಾಡದಲ್ಲಿದ್ದು, ಆರ್.ಆರ್.ನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.

ನಾಮಪತ್ರ ಸಲ್ಲಿಕೆ ಹಿನ್ನೆಲೆ ರಾಜರಾಜೇಶ್ವರಿ ನಗರ ಜಂಟಿ ಆಯುಕ್ತರ ಕಚೇರಿಯ ಸುತ್ತಮುತ್ತ ಭದ್ರತೆ ಕೈಗೊಳ್ಳಲಾಗಿತ್ತು. ಮಂಗಳವಾರ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದ ಬೆನ್ನಲ್ಲೇ ಪಕ್ಷ ಟಿಕೆಟ್ ಘೋಷಣೆ ಮಾಡಿತ್ತು. ಇಂದು ಅಪಾರ ಬೆಂಬಲಿಗರು ಮತ್ತು ಸಚಿವರ ಜೊತೆ ಆಗಮಿಸಿದ ಮುನಿರತ್ನ ಅವರು ನಾಮಪತ್ರ ಸಲ್ಲಿಸಿ, ಎಲ್ಲ ಒಳ್ಳೇ ರೀತಿಯಲ್ಲಿ ನಡೆದಿದೆ. ನನ್ನ ಮೇಲಿರುವ ಕ್ಷೇತ್ರದ ಜನತೆಯ ಋಣವನ್ನ ತೀರಿಸುತ್ತೇನೆ ಎಂದರು. ಮುನಿರತ್ನ ಅವರಿಗೆ ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಆರ್.ಅಶೋಕ್ ಮತ್ತು ಸುಧಾಕರ್ ಸೇರಿದಂತೆ ಹಲವರು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.

ಇತ್ತ ಕಾಂಗ್ರೆಸ್ ಅಭ್ಯರ್ಥಿ ಹನುಮಂತರಾಯಪ್ಪ ಸಹ 11.45ಕ್ಕೆ ನಾಮಪತ್ರ ಸಲ್ಲಿಸಿ, ಇಂದು ನನ್ನ ಪಾಲಿಗೆ ಅತ್ಯಂತ ಮಹತ್ವದ ದಿನ. ನನ್ನ ಇಷ್ಟದ ದೇವರು ಆಂಜನೇಯನ ದರ್ಶನ ಮಾಡಿದ್ದೇನೆ. ದೇವರ ಪೂಜೆ ಬಳಿಕ ಹೊಸ ಶಕ್ತಿ ಬಂದಿದೆ. ಇಂತಹ ಅವಕಾಶ ಸಿಕ್ಕಿದ್ದಕ್ಕೆ ನಾನು ಯಾವಾಗಲೂ ಚಿರಋಣಿ. ತುಂಬಾ ಭಾವನಾತ್ಮಕ ದಿನ ಎಂದು ಹೇಳಿದರು. ಕುಸುಮಾ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸಾಥ್ ನೀಡಿದರು.

ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಮೊದಲಿಗೆ ರಾಜ ರಾಜರಾಜೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಗರ ಜಂಟಿ ಆಯುಕ್ತರ ಕಚೇರಿಗೆ ಆಗಮಿಸಿದರು. ನಾಮಪತ್ರ ಸಲ್ಲಿಸಿದ ಕೃಷ್ಣಮೂರ್ತಿ, ಬಿಜೆಪಿ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾನು ಆರ್.ಆರ್.ನಗರದ ಮನೆ ಮಗ. ಅಭಿವೃದ್ಧಿಗೆ ಜನರು ಮತ ಕೊಡಬೇಕು. ಇಲ್ಲಿ ನಾನು ಅಭ್ಯರ್ಥಿ ಅಲ್ಲ ಕುಮಾರಸ್ವಾಮಿ ಅಭ್ಯರ್ಥಿ. ಚುನಾವಣೆಯಲ್ಲಿ ಗೆದ್ದರೆ ನೀವು ಕಾಲಲ್ಲಿ ತೋರಿಸಿದ್ದನ್ನ ಮನಸ್ಸಿನಲ್ಲಿ ಇಟ್ಟು ಮಾಡ್ತೀನಿ. ನಾನು ಒಕ್ಕಲಿಗನೇ ಕಾಂಗ್ರೆಸ್ ಅವರು ಒಕ್ಕಲಿಗ ಅಂತ ಓಡಾಡಿದರೂ ಜನ ಜಾತಿ ಹೆಸರಲ್ಲಿ ಮತ ಕೊಡೊಲ್ಲ. ನೂರಕ್ಕೆ ನೂರು ನಾನು ಈ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೃಷ್ಣಮೂರ್ತಿ ಅವರ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *