ಯೋಧನ ಪ್ರಾಣ ರಕ್ಷಿಸಿ, ತನ್ನ ಕೈಕಳೆದುಕೊಂಡ ದಿಟ್ಟೆ ಕೇರಳ ಬಿಜೆಪಿ ಅಭ್ಯರ್ಥಿ!

Public TV
2 Min Read

– ಯೋಧನ ರಕ್ಷಿಸಿದ್ದು ಹೇಗೆ..?
– ವಿಕಾಸ್‍, ಜ್ಯೋತಿಯ ಪ್ರೇಮ್ ಕಹಾನಿ ಇಲ್ಲಿದೆ

ತಿರುವನಂತಪುರಂ: ತನ್ನ ಕೈ ಕಳೆದುಕೊಂಡು ಕೇರಳ ಯೋಧನ ಜೀವ ಉಳಿಸಿ ನಂತರ ಆತನನ್ನೇ ಮದುವೆಯಾದ ದಿಟ್ಟ ಮಹಿಳೆ ಇದೀಗ ಮತ್ತೊಂದು ಸಹಾಸಕ್ಕೆ ಕೈ ಹಾಕಿದ್ದು, ಡಿಸೆಂಬರ್ 10ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಹೌದು. ಛತ್ತೀಸ್ ಗಢ ಮೂಲದ ಜ್ಯೋತಿ(30) ಪಾಲಕ್ಕಾಡ್ ಜಿಲ್ಲೆಯ ಕೊಲಂಗೋಡ್ ಬ್ಲಾಕ್ ಪಂಚಾಯತ್‍ನ ಪಾಲತ್ತಲ್ಲ್ ಡಿವಿಷನ್ ಬಿಜೆಪಿ ಅಭ್ಯರ್ಥಿ. ಇವರು ಕೇರಳ ಮೂಲದ ಸಿಐಎಸ್‍ಎಫ್ ಯೋಧರೊಬ್ಬರ ಜೀವ ಉಳಿಸಿದಲ್ಲದೇ ಅವರನ್ನೇ ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದು, ಈಗಾಗಲೇ ಜನಮೆಚ್ಚುಗೆ ಪಡೆದಿದ್ದಾರೆ.

ಯೋಧನ ಜೀವ ಉಳಿಸಿದ ದಿಟ್ಟೆ:
2010 ಜನವರಿ 3ರಂದು ಜ್ಯೋತಿ ತನ್ನ ಕಾಲೇಜು ಹಾಸ್ಟೆಲಿನಿಂದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ಬಸ್ಸಿನ ಮುಂದಿನ ಸೀಟಿನಲ್ಲಿ ಯೋಧ ವಿಕಾಸ್ ಕುಳಿತಿದ್ದು, ನಿದ್ದೆಗೆ ಜಾರಿದ್ದರು. ಅಲ್ಲದೆ ತಮ್ಮ ತಲೆಯನ್ನು ಕಿಟಿಕಿಯಿಂದ ಹೊರಗಡೆ ಹಾಕಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಟ್ರಕ್ ಒಂದು ಎದುರಿನಿಂದ ಅಡಾದಿಡ್ಡಿಯಾಗಿ ಬರುತ್ತಿತ್ತು. ಇದನ್ನು ಹಿಂದಿನ ಸೀಟಿನಲ್ಲಿ ಕುಳಿತಿದ್ದ ಜ್ಯೋತಿ ಗಮನಿಸಿದ್ದಾರೆ.

ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಹಿಂದಿನ ಸೀಟಿನಲ್ಲಿದ್ದ ಜ್ಯೋತಿ ಮುಂದೆ ಬಂದು ತನ್ನ ಬಲಗೈಯಿಂದ ವಿಕಾಸ್‍ರ ತಲೆಯನ್ನು ಕಿಟಿಕಿ ಒಳಕ್ಕೆ ತಳ್ಳಿ ಸ್ವತಃ ಕೈಯನ್ನು ಕಳೆದುಕೊಂದು ಸೈನಿಕನ ಜೀವ ರಕ್ಷಿಸಿದ್ದಾರೆ. ಇತ್ತ ನಿದ್ದೆಯಿಂದ ಎಚ್ಚರವಾಗಿ ವಿಕಾಸ್ ತನ್ನ ಜೀವ ರಕ್ಷಿಸಿದ ಜ್ಯೋತಿಯನ್ನು ತಕ್ಷಣ ಆಸ್ಪತ್ರೆಗೆ ಒಯ್ದರೂ ಕೈಯನ್ನು ಜೋಡಿಸಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಅಂದು ಸಿಪಿಎಂ ಮುಖಂಡನಿಂದ ಹೊಟ್ಟೆಗೆ ತುಳಿತ, ಗರ್ಭಪಾತ – ಇಂದು ಕೇರಳ ಬಿಜೆಪಿ ಅಭ್ಯರ್ಥಿ

ದುರಂತ ಘಟನೆಯಲ್ಲಿ ಆರಂಭವಾದ ಯೋಧನ ಪ್ರೇಮ್ ಕಹಾನಿ 2011ರಲ್ಲಿ ಮದುವೆಯವರೆಗೆ ತಲುಪಿ, ಇಂದು ಪಾಲಕ್ಕಾಡ್ ನಲ್ಲಿ 2 ಮಕ್ಕಳ ಜೊತೆ ಸುಖವಾದ ಜೀವನ ಸಾಗಿಸುತ್ತಿದ್ದಾರೆ. ಘಟನೆ ಸಂದರ್ಭದಲ್ಲಿ ಜ್ಯೋತಿ ಬಿಎಸ್ ಸಿ ನರ್ಸಿಂಗ್ ಓದುತ್ತಿದ್ದರು. ಆದರೆ ತನ್ನ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದ್ದಾರೆ. ಸದ್ಯ ಕೇರಳದಲ್ಲಿರುವ ಜ್ಯೋತಿ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೊಡೆ ಬ್ಲಾಕ್ ಪಂಚಾಯ್ತಿಯ ಪಾಲತ್ತಲ್ಲ್ ಡಿವಿಷನ್ ನ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಈ ಸಂಬಂಧ ಮಾತನಾಡಿರುವ ಜ್ಯೋತಿ, ನಾನು ಪ್ರಧಾನಿ ಮೋದಿಯವರ ರಾಜಕಾರಣದಿಂದ ಆಕರ್ಷಿತಳಾಗಿದ್ದೇನೆ. ಅಭ್ಯರ್ಥಿಯಾಗುವಂತೆ ಪಕ್ಷವೇ ನನ್ನನ್ನು ಕೆಳಿದಾಗ ಇಲ್ಲ ಎನ್ನಲು ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಮನೆಯವರಿಂದಲೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಆದರೆ ಜನ ನನಗೆ ಮತ ಹಾಕ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *