ಯೂಟ್ಯೂಬರ್‌ ವಿರುದ್ಧ 500 ಕೋಟಿ ಮಾನನಷ್ಟ ಕೇಸ್‌ ಹಾಕಿದ ಅಕ್ಷಯ್‌ ಕುಮಾರ್‌

Public TV
2 Min Read

– 4 ತಿಂಗಳಿನಲ್ಲಿ ಲಕ್ಷಗಟ್ಟಲೇ ಹಣ ಸಂಪಾದನೆ
– ಸಬ್‌ಸ್ಕ್ರೈಬರ್ಸ್ ಸಂಖ್ಯೆ 2 ಲಕ್ಷ ‌ ಏರಿಕೆ

ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತನ್ನ ವಿರುದ್ಧವಾಗಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಕ್ಕೆ ಯೂಟ್ಯೂಬರ್‌ ವಿರುದ್ಧ ಕೋಟಿಗಟ್ಟಲೇ ಮಾನನಷ್ಟ ಪ್ರಕರಣವನ್ನು ದಾಖಲಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪ ಮಾಡಿದ್ದಕ್ಕೆ ಯೂಟ್ಯೂಬರ್‌ ರಶೀದ್ ಸಿದ್ದಿಕಿ ವಿರುದ್ಧ 500 ಕೋಟಿ ರೂ. ಮಾನನಷ್ಟ ಕೇಸ್‌ ಹೂಡಿದ್ದಾರೆ.

ಸಿದ್ದಿಕಿ ಹೇಳಿದ್ದು ಏನು?
ಎಂಎಸ್ ಧೋನಿ: ದಿ ಅನ್‌ ಟೋಲ್ಡ್‌ ಸ್ಟೋರಿಯಂತಹ ಹಿಟ್‌ ಚಿತ್ರದಲ್ಲಿ ಸುಶಾಂತ್‌ ನಟಿಸಿದ್ದಕ್ಕೆ ಅಕ್ಷಯ್‌ ಕುಮಾರ್‌ ಅಸಮಾಧಾನವನ್ನು ಹೊಂದಿದ್ದರು. ಅಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಅವರು ಸುಶಾಂತ್‌ ಪ್ರಕರಣದ ಸಂಬಂಧ ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರೊಂದಿಗೆ ರಹಸ್ಯ ಸಭೆಯನ್ನು ನಡೆಸಿದ್ದರು.

ಸುಶಾಂತ್‌ ಸಿಂಗ್‌ ಗೆಳತಿ ರಿಯಾ ಚಕ್ರವರ್ತಿ ಜೊತೆ ಅಕ್ಷಯ್‌ ಕುಮಾರ್‌ ಸಂಪರ್ಕ ಹೊಂದಿದ್ದರು. ರಿಯಾ ಕೆನಡಾಗೆ ತೆರಳಲು ಅಕ್ಷಯ್‌ ಕುಮಾರ್‌ ಸಹಾಯ ಮಾಡಿದ್ದರು ಎಂದು ಸಿದ್ದಿಕಿ ವಿಡಿಯೋದಲ್ಲಿ ಆರೋಪಿಸಿದ್ದ.

 

ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ವಿರುದ್ಧ ನಕಲಿ ಸುದ್ದಿ ಹರಡಿದ ಆರೋಪದ ಹಿನ್ನೆಲೆಯಲ್ಲಿ ರಶೀದ್ ಸಿದ್ದಿಕಿಯನ್ನು ಬಂಧಿಸಲಾಗಿತ್ತು. ನ್ಯಾಯಾಲಯ ಈತನಿಗೆ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದ್ದು ಪೊಲೀಸ್‌ ತನಿಖೆಗೆ ಸಹಕಾರ ನೀಡಬೇಕೆಂದು ಸೂಚಿಸಿದೆ.

ಎಷ್ಟು ಹಣ ಸಂಪಾದನೆ?
ಬಿಹಾರ ಮೂಲದ ಸಿವಿಲ್ ಎಂಜಿನಿಯರ್ ಸಿದ್ದಿಕಿ ಎಫ್‌ಎಫ್‌ ನ್ಯೂಸ್‌ ಹೆಸರಿನಲ್ಲಿ ಯೂ ಟ್ಯೂಬ್‌ ಚಾನೆಲ್‌ ತೆರೆದಿದ್ದಾನೆ. ಸಬ್‌ ಸ್ಕ್ರೈಬರ್ಸ್‌ ಸಂಖ್ಯೆ ಲಕ್ಷಕ್ಕೂ ಹೆಚ್ಚು ಇರುವ ಕಾರಣ ಯೂ ಟ್ಯೂಬ್‌ನಿಂದ ಅಧಿಕೃತ ಟಿಕ್‌ ಮಾರ್ಕ್‌ ಸಹ ಸಿಕ್ಕಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 15 ಲಕ್ಷ ರೂ. ಗಳಿಸಿದ್ದ. ಸುಶಾಂತ್‌ ಸಿಂಗ್‌ ಪ್ರಕರಣದಿಂದಾಗಿ ಆತನ ಸಬ್‌ಸ್ಟ್ರೈಬರ್ಸ್‌ ಸಂಖ್ಯೆ 1 ಲಕ್ಷದಿಂದ 3 ಲಕ್ಷಕ್ಕೆ ಏರಿಕೆಯಾಗಿತ್ತು.

ಯಾವ ತಿಂಗಳಿನಲ್ಲಿ ಎಷ್ಟು?
ಸುಶಾಂತ್‌ ಸಿಂಗ್‌ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ವರ್ಷದ ಜೂನ್‌ 20ರಂದು. ಶುಶಾಂತ್‌ ಸಿಂಗ್‌ ಪ್ರಕರಣದಿಂದಾಗಿ ಈತನ ವಿಡಿಯೋಗಳ ವ್ಯೂ ಜಾಸ್ತಿಯಾಗಿ ದಿಢೀರ್‌ ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡಿದ್ದಾನೆ.

ಏಪ್ರಿಲ್‌ನಲ್ಲಿ 7,120 ರೂ., ಮೇ 296 ರೂ. ಜೂನ್‌ 38,200 ರೂ., ಜುಲೈ 2,75,025 ರೂ., ಆಗಸ್ಟ್‌ 5,57,658 ರೂ., ಸೆಪ್ಟೆಂಬರ್‌ 6,50,898 ರೂ., ಅಕ್ಟೋಬರ್‌ 2,38,180 ರೂ., ನವೆಂಬರ್ ತಿಂಗಳಿನಲ್ಲಿ‌ 35,901 ರೂ. ಹಣವನ್ನು ಸಿದ್ದಿಕಿ ಸಂಪಾದಿಸಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *