ಯುವ ಆಟಗಾರೊಂದಿಗೆ ತಂಡ ಕಟ್ಟಿದ ಧೋನಿ ಪಾಂಟಿಂಗ್‍ಗಿಂತ ಬೆಸ್ಟ್ ನಾಯಕ: ಅಫ್ರಿದಿ

Public TV
2 Min Read

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಸ್ ಧೋನಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‍ಗಿಂತ ಬೆಸ್ಟ್ ಕ್ಯಾಪ್ಟನ್ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ವಿಶ್ವ ಮಟ್ಟದ ಕ್ರಿಕೆಟ್ ನಾಯಕರನ್ನು ತೆಗದುಕೊಂಡರೆ ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ನಡುವೆ ಸ್ಪರ್ಧೆ ಉಂಟಾಗುತ್ತದೆ. ಏಕೆಂದರೆ ಇಬ್ಬರು ಭಾರತ ಮತ್ತು ಆಸ್ಟ್ರೇಲಿಯಾದ ಪ್ರಬಲ ನಾಯಕರು, ಜೊತೆಗೆ ಇಬ್ಬರು ಎರಡು ಐಸಿಸಿ ವಿಶ್ವಕಪ್ ಅನ್ನು ಗೆದ್ದ ನಾಯಕರು. ಹೀಗಾಗಿ ಈ ಇಬ್ಬರ ನಡುವೆ ಸ್ಪರ್ಧೆ ಏರ್ಪಡುವುದು ಸಾಮಾನ್ಯ. ಆದರೆ ಈ ಇಬ್ಬರ ನಡುವೆ ಅಫ್ರಿದಿ ಅವರು ಧೋನಿಯನ್ನೇ ಶ್ರೇಷ್ಠ ನಾಯಕ ಎಂದಿದ್ದಾರೆ.

ಅಫ್ರಿದಿ ಅವರು ಬುಧವಾರ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ನಿಮ್ಮ ಪ್ರಕಾರ ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ಈ ಇಬ್ಬರಲ್ಲಿ ಯಾರು ಉತ್ತಮ ನಾಯಕರು ಮತ್ತು ಯಾಕೆ ಎಂದು ಪ್ರಶ್ನೆ ಮಾಡಿದ್ದಾನೆ. ಈ ಪ್ರಶ್ನೆಗೆ ಉತ್ತರಿಸಿರುವ ಶಾಹಿದ್ ಅಫ್ರಿದಿ, ನಾನು ಇದರಲ್ಲಿ ಪಾಂಟಿಂಗ್‍ಗಿಂತ ಧೋನಿಗೆ ಹೆಚ್ಚಿನ ಅಂಕಗಳನ್ನು ಕೊಡುತ್ತೇನೆ. ಏಕೆಂದರೆ ಧೋನಿ ಯುವ ಆಟಗಾರರನ್ನು ಇಟ್ಟುಕೊಂಡು ಉತ್ತಮ ತಂಡವನ್ನು ಕಟ್ಟಿದ್ದಾರೆ ಎಂದಿದ್ದಾರೆ. ಇದನ್ನು ಓದಿ: ಧೋನಿ ಟ್ರೋಫಿಗಳನ್ನು ಗೆದ್ದಿರಬಹುದು, ಕಷ್ಟದ ಕಾಲದಲ್ಲಿ ತಂಡ ಕಟ್ಟಿದ್ದು ದಾದಾ: ಪಾರ್ಥಿವ್

ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನದ ಜನರಿಗೆ ಅಫ್ರಿದಿ ಸಹಾಯ ಮಾಡುತ್ತಿದ್ದಾರೆ. ಜೊತೆಗೆ ಇತ್ತೀಚೆಗೆ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಈಗ ಗುಣಮುಖರಾಗಿರುವ ಅಫ್ರಿದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುತ್ತಾರೆ. ಈಗ ಅಫ್ರಿದಿ ವಿವಿಯನ್ ರಿಚಡ್ರ್ಸ್ ಅವರನ್ನು ತಮ್ಮ ನೆಚ್ಚಿನ ಬ್ಯಾಟ್ಸ್‍ಮನ್ ಮತ್ತು ಅಬ್ದುಲ್ ಖಾದಿರ್ ಅವರ ಸಾರ್ವಕಾಲಿಕ ನೆಚ್ಚಿನ ಸ್ಪಿನ್ನರ್ ಎಂದು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಧೋನಿಯವರು ವೈಟ್-ಬಾಲ್ ಕ್ರಿಕೆಟ್‍ನಲ್ಲಿ ನಾಯಕನಾಗಿ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ. 2007ರ ಚೊಚ್ಚಲ ಟಿ-20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಧೋನಿ ಅವರ ನಾಯಕ್ವದಲ್ಲಿ ಗೆದ್ದಿತ್ತು. ಈ ಕಾರಣದಿಂದ ಧೋನಿಯವರನ್ನು ಬೆಸ್ಟ್ ನಾಯಕ ಎನ್ನಲಾಗುತ್ತದೆ. ಜೊತೆಗೆ ರಿಕಿ ಪಾಂಟಿಂಗ್ ಅವರ ನಾಯಕ್ವದಲ್ಲಿ ಆಸ್ಟ್ರೇಲಿಯಾ ಕೂಡ 2003 ಮತ್ತು 2007ರ ವಿಶ್ವಕಪ್ ಅನ್ನು ಗೆದ್ದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *