ಲಕ್ನೋ: ಕೊರೊನಾ ಹೆಚ್ಚಳ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರ ಒಂದರಿಂದ 12ನೇ ತರಗತಿಗೆ ರಜೆ ನೀಡಿದೆ. ಹಾಗೆಯೇ ಮುಂದಿನ ಆದೇಶದವರೆಗೂ ಯುಪಿ ಬೋರ್ಡ್ ಪರೀಕ್ಷೆಗಳನ್ನ ಮುಂದೂಡಲಾಗಿದೆ.
ಮೇನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳ ದಿನಾಂಕವನ್ನ ಶೀಘ್ರದಲ್ಲೇ ಹೇಳಲಾಗುವುದು. ರಜೆ ದಿನಗಳನ್ನ ವ್ಯರ್ಥ ಮಾಡದೇ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬುಧವಾರ 22,439 ಮಂದಿಗೆ ಸೋಂಕು ತಗುಲಿದೆ. ಲಕ್ನೋ ನಗರದಲ್ಲಿಯೇ 5,183 ಜನಕ್ಕೆ ಸೋಂಕು ತಗುಲಿದೆ. ಬುಧವಾರ ಸಿಎಂ ಯೋಗಿ ಆದಿತ್ಯನಾಥ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬುಧವಾರ 10ನೇ ತರಗತಿ ಪರೀಕ್ಷೆಯನ್ನು ಸಿಬಿಎಸ್‍ಸಿ ರದ್ದುಗೊಳಿಸಿದೆ. 10ನೇ ಕ್ಲಾಸ್‍ಗೆ ನಿಗದಿಪಡಿಸಿದ ಮಾನದಂಡದ ಆಧಾರದ ಮೇಲೆ ಫಲಿತಾಂಶವನ್ನು ನೀಡಲಾಗುವುದು ಎಂದು ಹೇಳಿದೆ. 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿದೆ. 12ನೇ ತರಗತಿ ಪರೀಕ್ಷೆ ಬಗ್ಗೆ, ಜೂನ್ 1ರಂದು ಮತ್ತೊಮ್ಮೆ ಪರಿಶೀಲನೆ ಮಾಡೋದಾಗಿ ಹೇಳಿದೆ. ಪರೀಕ್ಷೆಗೂ ಮೊದಲು ಕನಿಷ್ಠ 15 ದಿನಗಳ ಮೊದಲೇ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಸಿಬಿಎಸ್‍ಇ ಎಕ್ಸಾಂ ಮುಂದೂಡಿಕೆ ಬಗ್ಗೆ ದೇಶಾದ್ಯಂತ ಒತ್ತಡ ಬಂದಿತ್ತು. ಈ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ಇಂದು ಮಹತ್ವದ ಸಭೆ ನಡೆಸಿದ್ದರು. ಬೆನ್ನಲ್ಲೇ ಸಿಬಿಎಸ್‍ಇ ಈ ನಿರ್ಧಾರ ಪ್ರಕಟಿಸಿದೆ. ಆದರೆ ಈ ಪರಿಸ್ಥಿತಿಗೆ ಮೋದಿ ಸರ್ಕಾರದ ನಿರ್ಲಕ್ಯವೇ ಕಾರಣ ಅಂತ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಟೀಕಿಸಿದ್ದಾರೆ. ರಾಜಸ್ಥಾನದಲ್ಲೂ ಕೂಡ 10, 12ನೇ ಕ್ಲಾಸ್‍ನ ಬೋರ್ಡ್ ಎಕ್ಸಾಂ ಮುಂದೂಡಿಕೆಯಾಗಿದೆ.