ಯುಪಿ ಚುನಾವಣಾ ಅಖಾಡಕ್ಕೆ ‘ಆಪ್’ ಎಂಟ್ರಿ

Public TV
1 Min Read

ನವದೆಹಲಿ: 2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಯುಪಿಯ ಜನರು ದೆಹಲಿಗೆ ಬರುತ್ತಿರೋದು ಏಕೆ? ಇಲ್ಲಿ ಸಿಗುವ ಸೌಲಭ್ಯ, ಉದ್ಯೋಗ ಸಿಗದಕ್ಕೆ ಉತ್ತರ ಪ್ರದೇಶದ ಜನ ದೆಹಲಿಗೆ ವಲಸೆ ಬರುತ್ತಿದ್ದಾರೆ. ಅಲ್ಲಿಯ ಕೊಳಕು ರಾಜಕೀಯ ಅಂತ್ಯವಾಗುವರೆಗೂ ಯುಪಿ ಬದಲಾಗಲ್ಲ. ಈ ಬದಲಾವಣೆಗಾಗಿ ಆಪ್ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲಿದೆ ಎಂದು ಪರೋಕ್ಷವಾಗಿ ಸಿಎಂ ಯೋಗಿ ಸರ್ಕಾರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸಂಗಮ್ ವಿಹಾರದಲ್ಲಿ ಮೊಹಲ್ಲಾ ಕ್ಲಿನಿಕ್ ಆರಂಭವಾಗುತ್ತೆ ಅಂದ್ರೆ ಲಕ್ನೋದ ಗೋಮತಿನಗರದಲ್ಲಿ ಏಕೆ ಸಾಧ್ಯವಿಲ್ಲ. ಉತ್ತರ ಪ್ರದೇಶದ ಜನತೆಗೆ ಉಚಿತ ನೀರು, ವಿದ್ಯುತ್, ಖಾಸಗಿ ಶಿಕ್ಷಣ ಸಂಸ್ಥೆ ರೀತಿಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೇಕೆ? ಉತ್ತರ ಪ್ರದೇಶದ ಮೂಲದ ಬಹುತೇಕ ಜನರು ದೆಹಲಿಯಲ್ಲಿ ವಾಸವಾಗಿದ್ದಾರೆ. ಇಲ್ಲಿ ಸಿಗುವ ಸೌಲಭ್ಯಗಳು ಅವರಿಗೆ ಯುಪಿಯಲ್ಲಿ ಸಿಗುವಂತಾಗಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೆಲಸ ಮಾಡುವ ಮೂಲಕ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮೂರನೇ ಬಾರಿ ಸರ್ಕಾರ ರಚಿಸಿದೆ. ದೆಹಲಿಯ ರೀತಿಯ ಉಚಿತ ನೀರು, ವಿದ್ಯುತ್, ಗುಣಮಟ್ಟದ ಶಿಕ್ಷಣ, ವೈದ್ಯಕೀಯ ಸೌಲಭ್ಯ ಲಭ್ಯವಾಗಬೇಕಿದೆ. ಉತ್ತರ ಪ್ರದೇಶದ ಜನತೆಗೆ ಹಳೆಯ ರಾಜಕೀಯ ಪಕ್ಷಗಳಿಂದ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ಆಪ್ ಜೊತೆ ನಿಲ್ಲಲ್ಲಿದ್ದಾರೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *