ಯುಪಿಯಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿ

Public TV
1 Min Read

– ಸಂಪುಟ ಸಭೆಯಲ್ಲಿ ನಿರ್ಧರಿಸಿ ಸುಗ್ರೀವಾಜ್ಞೆ

ಲಕ್ನೋ: ಲವ್ ಜಿಹಾದ್ ಕುರಿತು ಹೆಚ್ಚು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತಂದಿದ್ದು, ಒಂದು ವೇಳೆ ಆರೋಪ ಸಾಬೀತಾದಲ್ಲಿ 5 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸುವಂತೆ ಕಾನೂನು ರೂಪಿಸಲಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೆಲ ದಿನಗಳ ಹಿಂದಷ್ಟೇ ಕೇಂದ್ರ ಕಾನೂನು ಸಚಿವಾಲಯದ ಬಳಿ ಈ ಕುರಿತು ಯುಪಿ ಸರ್ಕಾರ ಚರ್ಚಿಸಿತ್ತು. ಇದೀಗ ಸುಗ್ರೀವಾಜ್ಞೆ ಹೊರಡಿಸಿ ‘ಲವ್ ಜಿಹಾದ್’ ಕಾನೂನನ್ನು  ಜಾರಿಗೆ ತರಲಾಗಿದೆ.

ಸುಗ್ರೀವಾಜ್ಞೆ ಹೊರಡಿಸುವ ಮುನ್ನ ಉತ್ತರ ಪ್ರದೇಶ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದ್ದು, ಸುಗ್ರೀವಾಜ್ಞೆ ಹೊರಡಿಸುವುದಕ್ಕೂ ಮುನ್ನ ನಾವು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪರೀಕ್ಷೆ ಮಾಡಿದ್ದೇವೆ. ಬಳಿಕ ಕಾನೂನು ಜಾರಿಗೆ ತಂದಿದ್ದೇವೆ. ವಿವಾಹಕ್ಕಾಗಿ ಬಲವಂತವಾಗಿ ಮತಾಂತರ ನಡೆಸಿದರೆ ಅಪರಾಧಿಗಳಿಗೆ ಒಂದರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಕಾನೂನಿನಲ್ಲಿ ತಿಳಿಸಿದೆ.

ಮುಂದಿನ ವಿಧಾನ ಸಭೆ ಅಧಿವೇಶನದಲ್ಲಿ ‘ಲವ್ ಜಿಹಾದ್’ ಎದುರಿಸಲು ಕಾನೂನು ರೂಪಿಸಲಿದ್ದೇವೆ ಎಂಬ ಆಡಳಿತ ಪಕ್ಷದ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಲವ್ ಜಿಹಾದ್ ಬಿಜೆಪಿಯವರೇ ಹುಟ್ಟು ಹಾಕಿರುವ ಪದ ಎಂದು ವಾಗ್ದಾಳಿ ನಡೆಸಿದ್ದವು.

ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಬಿಜೆಪಿ ನಾಯಕ ಕೈಲಾಶ್ ವಿಜಯ್‍ವರ್ಗಿಯಾ, ಲವ್ ಜಿಹಾದ್‍ನ ಅರ್ಥವನ್ನು ನಾವು ಅರಿಯಬೇಕಿದೆ. ಅಂತರ್ ಧರ್ಮ ವಿವಾಹಗಳ ಹಿಂದಿನ ಪಿತೂರಿಯನ್ನು ಅರಿತು ಕಾನೂನು ರೂಪಿಸಲಾಗಿದೆ. ಪ್ರೀತಿ, ಪ್ರೇಮ ಹಿಂದಿನಿಂದಲೂ ಇದೆ. ಅದು ಧರ್ಮ ಅಥವಾ ಜಾತಿಯನ್ನು ನೋಡುವುದಿಲ್ಲ. ಆದರೆ ಯಾರಾದರೂ ಮತಾಂತರದ ಉದ್ದೇಶದಿಂದ ಮತ್ತೊಬ್ಬರನ್ನು ಪ್ರೀತಿಸಿ ಮದುವೆಯಾದರೆ ಅದು ತಪ್ಪು. ಇದಕ್ಕಾಗಿ ಕಾನೂನು ರೂಪಿಸಲಾಗಿದೆ ಎಂದು ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *