ಯುಎಇಯಲ್ಲಿ ಐಪಿಎಲ್ ನಿಗದಿ ಬೆನ್ನಲ್ಲೇ ಟ್ರೋಲ್ ಆದ ಸುರೇಶ್ ರೈನಾ

Public TV
2 Min Read

ಚೆನ್ನೈ: ಯುಎಇನಲ್ಲಿ 2021ರ ಐಪಿಎಲ್ ಮುಂದಿನ ಭಾಗ ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಟ್ವೀಟ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್‍ಗೆ ಒಳಗಾಗಿದ್ದಾರೆ.

14ನೇ ಆವೃತ್ತಿಯ ಐಪಿಎಲ್‍ನ ಮುಂದಿನ ಭಾಗವನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ಮಂಡಳಿಯ ವಿಶೇಷ ಮಹಾಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ನಿಧಾರವನ್ನು ಬಿಸಿಸಿಐ ಖಚಿತಪಡಿಸುತ್ತಿದ್ದಂತೆ, ಸಂತಸಗೊಂಡ ಸುರೇಶ್ ರೈನಾ, ಧೋನಿ ಮತ್ತು ತಾವು ಜೊತೆಗಿರುವ ಫೋಟೋ ಪೋಸ್ಟ್ ಮಾಡಿ ಮುಂದಿನ ಭೇಟಿ ದುಬೈನಲ್ಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಧೋನಿ ಬಗ್ಗೆ ಅಚ್ಚರಿ ಮಾತು – ಕೊಹ್ಲಿಗೆ ಅಭಿಮಾನಿಗಳಿಂದ ಚಪ್ಪಾಳೆ

ಸುರೇಶ್ ರೈನಾ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಸುರೇಶ್ ರೈನಾಗೆ ದುಬೈನಲ್ಲಿ ಬಾಲ್ಕನಿ ಹೊಂದಿರುವ ರೂಂ ಬುಕ್ ಮಾಡಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್‍ಗೆ ಮನವಿ ಮಾಡುವ ಮೂಲಕ ಪರೋಕ್ಷವಾಗಿ ರೈನಾರ ಕಾಲೆಳೆದಿದ್ದಾರೆ. ಈ ರೀತಿ ಟ್ರೋಲ್ ಮಾಡಲು ಕಾರಣ ಇದೆ. ಕಳೆದ ಬಾರಿ 2020ರ ಐಪಿಎಲ್ ದುಬೈನಲ್ಲಿ ನಡೆದಾಗ ಸುರೇಶ್ ರೈನಾ ಟೂರ್ನಿ ಆರಂಭಕ್ಕೂ ಮೊದಲೇ ತಂಡವನ್ನು ತೊರೆದು ಮನೆ ಸೇರಿದ್ದರು. ಈ ವೇಳೆ ಅವರಿಗೆ ಸರಿಯಾದ ರೂಂ ವ್ಯವಸ್ಥೆ ಮಾಡದ ಕಾರಣ ಮುನಿಸಿಕೊಂಡು ತಂಡ ತೊರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಹಾಗಾಗಿ ಈ ಬಾರಿ ಮೊದಲೇ ಚೆನ್ನೈ ಫ್ರಾಂಚೈಸ್‍ಗೆ ನೆಟ್ಟಿಗರು ಬಾಲ್ಕನಿ ರೂಂನ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

ಆದರೆ ಕಳೆದ 13ನೇ ಆವೃತ್ತಿಯ ಐಪಿಎಲ್‍ನಿಂದ ಹಿಂದೆ ಸರಿಯಲು ತಮ್ಮ ವೈಯಕ್ತಿಕ ಕಾರಣ ಇತ್ತು ಎಂದು ರೈನಾ ಸ್ಪಷ್ಟ ಪಡಿಸಿದ್ದರು. ಆ ಬಳಿಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡದ ಪರ ರೈನಾ ಕಣಕ್ಕಿಳಿದಿದ್ದರು. ಆದರೆ 14ನೇ ಆವೃತ್ತಿಯ ಐಪಿಎಲ್ ಕೊರೊನಾದಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಇದೀಗ ಮುಂದುವರಿದ ಭಾಗ ಮತ್ತೆ ದುಬೈನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್

ಈ ಮೂಲಕ ಮೂರನೇ ಬಾರಿ ದುಬೈನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆಯಲ್ಲಿದೆ. ಈ ಮೊದಲು 2014ರಲ್ಲಿ ಭಾರತದಲ್ಲಿ ಚುನಾವಣೆ ಇದ್ದ ಕಾರಣ ಮತ್ತು 2020ರಲ್ಲಿ ಕೊರೊನಾದಿಂದಾಗಿ ದುಬೈನಲ್ಲಿ ಟೂರ್ನಿ ನಡೆದಿತ್ತು. ಇದೀಗ ಮತ್ತೆ ಭಾರತದಲ್ಲಿ ಕೊರೊನಾದಿಂದಾಗಿ 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ಮತ್ತೆ ದುಬೈನಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.

ರೈನಾ, ಮುಂದೂಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 7 ಪಂದ್ಯಗಳನ್ನು ಆಡಿ 1 ಅರ್ಧಶತಕ ಸಹಿತ 123 ರನ್ ಗಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *