ಯುಎಇಯಲ್ಲಿ ಐಪಿಎಲ್ ಆಯೋಜಿಸಿ ಗೆದ್ದ ಬಿಸಿಸಿಐಗೆ ಹರಿದು ಬಂತು ಭಾರೀ ಆದಾಯ

Public TV
2 Min Read

ಮುಂಬೈ: ಯುಎಇಯಲ್ಲಿ ಐಪಿಎಲ್-2020ಯನ್ನು ಆಯೋಜನೆ ಮಾಡಿ ಯಶಸ್ವಿಯಾಗಿ ಮುಗಿಸಿದ ಬಿಸಿಸಿಐಗೆ ಬರೋಬ್ಬರಿ ನಾಲ್ಕು ಸಾವಿರ ಕೋಟಿ ಆದಾಯ ಬಂದಿದೆ.

ಕೊರೊನಾ ಕಾರಣದಿಂದ ಮಾರ್ಚ್‍ನಲ್ಲಿ ನಡೆಯಬೇಕಿದ್ದ ಐಪಿಎಲ್ ಅನ್ನು ಬಿಸಿಸಿಐ ಮುಂದೂಡಿತ್ತು. ಆರು ತಿಂಗಳಾದರು ಕೊರೊನಾ ಕಮ್ಮಿಯಾಗದ ಕಾರಣ ಈ ಬಾರಿ ಐಪಿಎಲ್ ನಡೆಯುವುದು ಅನುಮಾನ ಎನ್ನಲಾಗಿತ್ತು. ಆದರೆ ಐಪಿಎಲ್ ರದ್ದಾದರೆ, ಬಹಳ ನಷ್ಟವಾಗುತ್ತದೆ ಎಂದು ಅರಿತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರು ಆರು ತಿಂಗಳು ತಡವಾದರು ಯುಎಇಯಲ್ಲಿ ಐಪಿಎಲ್ ಅನ್ನು ಆಯೋಜನೆ ಮಾಡಿದ್ದರು.

ಈಗ ಐಪಿಎಲ್-2020ಯಿಂದ ಬಂದ ಆದಾಯದ ಬಗ್ಗೆ ಮಾತನಾಡಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಐಪಿಎಲ್ ಆಯೋಜನೆಗೆ ಅವಕಾಶ ಮಾಡಿಕೊಟ್ಟ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಧನ್ಯವಾದಗಳು. ಬಿಸಿಸಿಐ ಯಶಸ್ವಿಯಾಗಿ ಐಪಿಎಲ್ ಆಯೋಚನೆ ಮಾಡಿ ಗೆದ್ದಿದೆ. ಜೊತೆಗೆ ಐಪಿಎಲ್‍ನಿಂದ ಬಿಸಿಸಿಐಗೆ 4 ಸಾವಿರ ಕೋಟಿ ರೂ. ಆದಾಯ ಬಂದಿದೆ. ಐಪಿಎಲ್-2020ಯನ್ನು ದಾಖಲೆಯ ಮಟ್ಟದಲ್ಲಿ ವೀಕ್ಷಿಸಿದ ವೀಕ್ಷಕರು ವಿಶ್ವದಾಖಲೆ ಬರೆದಿದ್ದಾರೆ ಎಂದು ಹೇಳಿದ್ದಾರೆ.

ಜೊತೆಗೆ ಕಳೆದ ಐಪಿಎಲ್‍ಗೆ ಹೋಲಿಕೆ ಮಾಡಿದರೆ, ಈ ಬಾರಿಯ ಐಪಿಎಲ್‍ನಲ್ಲಿ ಶೇಕಡಾ 35ರಷ್ಟು ವೆಚ್ಚವನ್ನು ನಾವು ಕಡಿಮೆ ಮಾಡಿದ್ದೇವೆ. ಇದರ ಜೊತೆಗೆ ನಾವು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಟಿವಿ ವೀಕ್ಷಕರನ್ನು ಪಡೆದಿದ್ದೇವೆ. ಈ ಬಾರಿ ಐಪಿಎಲ್ ಟಿವಿ ವೀಕ್ಷಕರ ಸಂಖ್ಯೆ ಕಳೆದ ಬಾರಿಗಿಂತ ಶೇ.25ರಷ್ಟು ಹೆಚ್ಚಾಗಿದೆ. ಇದರ ಜೊತೆಗೆ 30,000 ಸಾವಿರ ಕೊರೊನಾ ಟೆಸ್ಟ್ ಮಾಡಿಸಿದ್ದೇವೆ. ಕೊರೊನಾ ಪರೀಕ್ಷೆಗೆಂದೆ ಸುಮಾರು 1,500 ಸಾವಿರ ಜನ ಕೆಲಸ ಮಾಡಿದ್ದಾರೆ ಎಂದು ಧಮಾಲ್ ತಿಳಿಸಿದ್ದಾರೆ.

ದಾಖಲೆ ಬರೆದಿದ್ದ ಐಪಿಎಲ್
ಐಪಿಎಲ್ ತನ್ನ ಆರಂಭದ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದಿತ್ತು. ಅಂದು ಟ್ವೀಟ್ ಮಾಡಿದ್ದ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರು, ಡ್ರೀಮ್ 11 ಐಪಿಎಲ್ ಮೊದಲ ಪಂದ್ಯದಲ್ಲೇ ದಾಖಲೆ ಬರೆದಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ, ಐಪಿಎಲ್ ಆರಂಭಿಕ ಪಂದ್ಯವನ್ನು ಸುಮಾರು 20 ಕೋಟಿ ಜನರು ಆನ್‍ಲೈನ್ ಮತ್ತು ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಕ್ರೀಡಾ ಟೂರ್ನಿಯ ಮೊದಲ ಪಂದ್ಯವನ್ನು ಇಷ್ಟೊಂದು ಜನರು ವೀಕ್ಷಣೆ ಮಾಡಿಲ್ಲ ಎಂದು ತಿಳಿಸಿದ್ದರು.

ಈ ವರ್ಷ ಮಾರ್ಚ್‍ನಲ್ಲೇ ಆರಂಭವಾಗಬೇಕಿದ್ದ ಐಪಿಎಲ್-2020 ಆರು ತಿಂಗಳು ತಡವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಿತ್ತು. ಕೊರೊನಾ ನಡುವೆಯೂ ಯಾವುದೇ ಅಡತಡೆಗಳಿಲ್ಲದೇ ಐಪಿಎಲ್ ಭರ್ಜರಿಯಾಗಿ ಯಶಸ್ವಿಯಾಗಿತ್ತು. ನವೆಂಬರ್ 10ರಂದು ನಡೆದ ಫೈನಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ.

Share This Article
Leave a Comment

Leave a Reply

Your email address will not be published. Required fields are marked *