ಯಾವುದೇ ಪಕ್ಷದ ಜೊತೆ ಜೆಡಿಎಸ್ ವಿಲೀನ ಇಲ್ಲ: ಕುಮಾರಸ್ವಾಮಿ ಸ್ಪಷ್ಟನೆ

Public TV
2 Min Read

ಬೆಂಗಳೂರು: ಜೆಡಿಎಸ್ ಸ್ವತಂತ್ರವಾಗಿಯೇ ಹೋರಾಟ ನಡೆಸಲಿದೆ, ಯಾವುದೇ ಪಕ್ಷದ ಜೊತೆ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 1973ರಲ್ಲಿ 22 ಜನ ಶಾಸಕರನ್ನು ಇಟ್ಟುಕೊಂಡು ಎಚ್.ಡಿ.ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿ ಹೋರಾಟ ಆರಂಭಿಸಿದರು. ಕಾಂಗ್ರೆಸ್ ಹಾಗೂ ಜನತಾ ದಳ ಒಡೆದು ಹೋದ ಬಳಿಕ ಶ್ರಮಪಟ್ಟು ಪಕ್ಷವನ್ನು ಉಳಿಸಿಕೊಂಡು ಬಂದಿದ್ದೇವೆ. ರಾಜ್ಯದ ಸಮಸ್ಯೆಗಳಿಗೆ ಹೋರಾಟ ಮಾಡಿದ ದೇವೇಗೌಡರ ಕಳಕಳಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ನಾವು ಸ್ವತಂತ್ರವಾಗಿರುವ ನಿಟ್ಟಿನಲ್ಲಿ ಪಕ್ಷವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಯಾವುದೇ ಕಾರಣಕ್ಕೂ ಪಕ್ಷವನ್ನು ವಿಲೀನ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು. ಇದನ್ನೂ ಓದಿ: ಮುಂದೆ ರಾಜಕೀಯ ಧ್ರುವೀಕರಣ, ಒಂದು ಪಕ್ಷವೇ ವಿಲೀನವಾಗಬಹುದು – ಲಿಂಬಾವಳಿ

ಅರವಿಂದ ಲಿಂಬಾವಳಿ ಯಾವ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅಲ್ಲದೆ ಈ ಗುಮಾನಿ ಯಾಕೆ ಎದ್ದಿದೆ ಎಂಬುದು ಸಹ ತಿಳಿದಿಲ್ಲ. ಈಗ ಬಿಜೆಪಿ ಸ್ವತಂತ್ರವಾಗಿ ಆಡಳಿತ ನಡೆಸುವಷ್ಟು ಸ್ಥಾನ ಹೊಂದಿದೆ. ಬೇರೆ ಪಕ್ಷದ ಬೆಂಬಲದ ಅವಶ್ಯವಿಲ್ಲ. ಹೀಗಿರುವಾಗ ನಮ್ಮ ಪಕ್ಷವನ್ನು ವಿಲೀನ ಮಾಡಿ ಎಂಬ ಒತ್ತಡ ಹೇರುವ ಪ್ರಶ್ನೆ ಉದ್ಭವವಾಗುವುದೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರು ಹಾಗೂ ನನ್ನ ಬಗೆಗೆ ಇಟ್ಟಿರುವ ವಿಶೇಷ ಗೌರವದಿಂದಾಗಿ ಈ ರೀತಿಯ ಗುಮಾನಿ ಎದ್ದಿದೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್ ಜೊತೆ ಆಡಳಿತ ನಡೆಸಿದರೂ ಪ್ರಧಾನಿ ನರೇಂದ್ರ ಮೋದಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಸಹಕಾರ ನೀಡಿದರು. ಇದನ್ನೇ ಕೆಲವರು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಬಸವರಾಜ್ ಹೊರಟ್ಟಿ ಹಾಗೂ ಜಿ.ಟಿ.ದೇವೇಗೌಡರು ಅವರ ವೈಯಕ್ತಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದು ಪಕ್ಷದ ನಿರ್ಧಾರ ಅಲ್ಲ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ನಮ್ಮ ಮುಖಂಡರು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಸಿದ್ದರಾಮಯ್ಯನವರು ಜೆಡಿಎಸ್‍ನ್ನು ಬಿಜೆಪಿಯ ಬಿ ಟೀಮ್ ಎಂದರು. 29 ಕ್ಷೇತ್ರಗಳಲ್ಲಿ ಒಳ ಒಪ್ಪಂದ ಆಗಿತ್ತು ಎಂದು ಹೇಳಿದ್ದಾರೆ. ಹೀಗೆ ಒಳ ಒಪ್ಪಂದ ಮಾಡಿಕೊಂಡಿದ್ದರೆ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಲು ಸಾಧ್ಯವಾಗುತ್ತಿತ್ತಾ? ಹೀಗೆ ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಮ್ ಎನ್ನುವವರು ನಮ್ಮೊಂದಿಗೆ ಹೇಗೆ ಸರ್ಕಾರ ಮಾಡಿದರು. ರಾಜಕಾರಣದಲ್ಲಿ ಇದೇ ರೀತಿಯ ತೀರ್ಮಾನ ಆಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ವಿಲೀನವಾಗುವುದು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *