ಯಾರು ಲಸಿಕೆ ಪಡೆಯಬಹುದು? ಯಾರು ಪಡೆಯಬಾರದು? ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?

Public TV
2 Min Read

ನವದೆಹಲಿ: ದೇಶವನ್ನು ವರ್ಷಗಳ ಕಾಲ ಕಾಡಿರುವ ಮತ್ತು ಈಗಲೂ ಸಮಸ್ಯೆ ತಂದಿಟ್ಟಿರುವ ಹೆಮ್ಮಾರಿ ಕೊರೊನಾಗೆ ಲಸಿಕೆ ಬಂದಾಗಿದೆ. ದೇಶಾದ್ಯಂತ ಶನಿವಾರದಿಂದ ಕೊರೋನಾ ಲಸಿಕೆಯ ಮಹಾಯಜ್ಞ ಶುರುವಾಗಲಿದೆ.

ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.30ಕ್ಕೆ ಚಾಲನೆಗೆ ನೀಡಲಿದ್ದಾರೆ. ಅಲ್ಲದೆ, ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ದಿನವಾದ ನಾಳೆ ದೇಶಾದ್ಯಂತ 3 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಪಡೆಯಲಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವ್ಯಾಕ್ಸಿನ್ ಹಂಚಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನೆ ಮಾಡಲಿದ್ದಾರೆ. ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್‌ ತಯಾರಿಸಿರುವ ʼಕೊವಿಶೀಲ್ಡ್’ ಲಸಿಕೆಗಳು ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ರವಾನೆಯಾಗಿದೆ.

ಈ ಮಧ್ಯೆ, ನಾಳೆ ಹೈದ್ರಾಬಾದ್‍ನಿಂದಲೂ ಭಾರತ್ ಬಯೋಟೆಕ್‍ನ ಕೊವಾಕ್ಸಿನ್ ಲಸಿಕೆ ಪೊರೈಕೆ ಶುರುವಾಗಲಿದೆ. ದೇಶದ 12 ಕಡೆ 56 ಲಕ್ಷ ಕೊವಾಕ್ಸಿನ್ ಲಸಿಕೆ ಸಪ್ಲೈ ಆಗಲಿದೆ. 1 ಕೊವಾಕ್ಸಿನ್ ಲಸಿಕೆಗೆ 295 ರೂ.ನಂತೆ ವ್ಯಾಕ್ಸಿನ್ ಖರೀದಿ ಆಗಲಿದೆ. ಒಟ್ಟು 55 ಲಕ್ಷ ಲಸಿಕೆಯನ್ನು ಭಾರತ್ ಬಯೋಟೆಕ್ ಪೂರೈಸಲಿದ್ದು, ಮೊದಲ ಕಂತು – 38.5 ಲಕ್ಷ, ಎರಡನೇ ಕಂತು – 16.5 ಲಕ್ಷ ಲಸಿಕೆ ಇರಲಿದೆ.

ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಆಗುತ್ತಿರುವ ಹಿನ್ನೆಲೆಯಲ್ಲಿ . ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯಾರು ಲಸಿಕೆ ತೆಗೆದುಕೊಳ್ಳಬಹುದು..? ಯಾರಿಗೆ ಲಸಿಕೆ ಕೊಡಬಹುದು..? ಯಾರಿಗೆ ಕೋವಿಡ್ ಲಸಿಕೆ ಕೊಡಬಾರದು ಎಂಬ ಬಗ್ಗೆ ಮಾರ್ಗಸೂಚಿ ನೀಡಿದೆ.

ಮಾರ್ಗಸೂಚಿಯಲ್ಲಿ ಏನಿದೆ?
– 18 ಮತ್ತು 18 ವರ್ಷ ಮೇಲ್ಪಟ್ಟವರಿಗಷ್ಟೇ ಲಸಿಕೆ
– ಬಾಣಂತಿಯರು, ಸ್ತನ್ಯಪಾನ ನೀಡುತ್ತಿರುವ ತಾಯಂದಿರಿಗೆ ವ್ಯಾಕ್ಸಿನ್ ಬೇಡ
– ಗರ್ಭಿಣಿಯರು, ಗರ್ಭಧಾರಣೆ ಬಗ್ಗೆ ಇನ್ನೂ ಸ್ಪಷ್ಟ ಆಗದೇ ಇದ್ದಲ್ಲಿ ವ್ಯಾಕ್ಸಿನ್ ಬೇಡ
– ಅಲರ್ಜಿ ಸಮಸ್ಯೆ ಇರುವವರು ವ್ಯಾಕ್ಸಿನ್ ಪಡೆಯಬಾರದು
– ಕೊವಿಡ್ ಸೋಂಕಿಗೆ ಒಳಗಾದವರು, ಬಹು ಕಾಯಿಲೆ ಬಾಧಿತರು, ರೋಗ ನಿರೋಧಕ ಶಕ್ತಿ ಕಡಿಮೆ ಇರೋವವರು ಲಸಿಕೆ ಹಾಕಿಸಿಕೊಳ್ಳಬೇಕು

– ಮೊದಲಿಗೆ ಯಾವ ವ್ಯಾಕ್ಸಿನ್ ತೆಗೆದುಕೊಳ್ತಿರೋ 2ನೇ ಡೋಸ್ ಅದೇ ಇರಬೇಕು (ಉದಾ: ಕೊವಿಶೀಲ್ಡ್ ಲಸಿಕೆ ಪಡೆದಿದ್ದರೆ, 2ನೇ ಡೋಸ್ ಕೋವಿಶೀಲ್ಡ್‌ ಆಗಿರಬೇಕು)
– ಸದ್ಯಕ್ಕೆ ಕೊವಿಡ್ ಚಿಕಿತ್ಸೆ, ರೋಗ ನಿರೋಧಕ ಔಷಧಿ, ಪ್ಲಾಸ್ಮಾ ಚಿಕಿತ್ಸೆ ಪಡೆಯುತ್ತಿದ್ದರೆ ವ್ಯಾಕ್ಸಿನ್ ಬೇಡ
– ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೂ ಲಸಿಕೆ ಬೇಡ

– ಗುಣಮುಖರಾದ 4 ರಿಂದ 8 ವಾರಗಳ ಬಳಿಕ ಲಸಿಕೆ ಪಡೆಯಬಹುದು
– ಸಣ್ಣ ಪ್ರಮಾಣದ ಅಡ್ಡ ಪರಿಣಾಮ ಕಾಣಿಸಬಹುದು
– ಸ್ವಲ್ಪ ಜ್ವರ, ಇಂಜೆಕ್ಷನ್ ಪಡೆದ ಕಡೆ ನೋವು, ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು
– ಅಡ್ಡ ಪರಿಣಾಮಗಳ ಬಗ್ಗೆ ಚಿಂತೆ ಬೇಡ, ತಾನಾಗೇ ಗುಣಮುಖ ಆಗುತ್ತೆ
– ಸಂತಾನೋತ್ಪತ್ತಿ ಮೇಲೆ ಕೊವಿಡ್ ಲಸಿಕೆ ಪರಿಣಾಮ ಬೀರಲ್ಲ
– ಬೇರೆ ಲಸಿಕೆ ಪಡೆಯುತ್ತಿದ್ದರೆ 14 ದಿನಗಳ ಅಂತರದಲ್ಲಿ ಕೋವಿಡ್ ಲಸಿಕೆ ಪಡೆಯಬಹುದು
– ಕೊ-ವಿನ್ ಆ್ಯಪ್‍ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ
– ಸಾರ್ವಜನಿಕರಿಗೆ ನೋಂದಣಿಗಾಗಿ ಇನ್ನೂ ಕೊ-ವಿನ್ ಆ್ಯಪ್ ಬಿಡುಗಡೆ ಆಗಿಲ್ಲ

Share This Article
Leave a Comment

Leave a Reply

Your email address will not be published. Required fields are marked *