ಯಾರಾಗ್ತಾರೆ ಬಿಹಾರದ ಸಿಎಂ? ಎನ್‍ಡಿಎ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆ

Public TV
1 Min Read

ನವದೆಹಲಿ: ಚುನಾವಣೆ ಅಖಾಡದಲ್ಲಿ ಎನ್‍ಡಿಎ ಕೂಟದ ಸಿಎಂ ಅಭ್ಯರ್ಥಿ ಎಂದು ನಿತೀಶ್ ಕುಮಾರ್ ಬಿಂಬಿತರಾಗಿದ್ದರು. ಅದೇ ರೀತಿ ನಾಲ್ಕನೇ ಬಾರಿಗೆ ಸಿಎಂ ಗದ್ದುಗೆ ಏರುವ ಕನಸು ಕಂಡಿದ್ದು 69 ವರ್ಷದ ನಿತೀಶ್ ಕುಮಾರ್ ಪಟ್ಟಾಭಿಷೇಕಕ್ಕೆ ಕೆಲ ಅಡ್ಡಿಗಳು ಉಂಟಾಗಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ಬಿಹಾರದ ಸಿಎಂ ಯಾರು ಆಗಬೇಕೆಂದು ಎನ್‍ಡಿಎ ನಿರ್ಧರಿಸಲಿದ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕೊರೊನಾ ಸಮಯದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡಿತ್ತು. ಅದೇ ರೀತಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಕ್ರೈಂ ರೇಟ್ ಪಟ್ಟಿಯಲ್ಲಿ ಬಿಹಾರ 21ನೇ ಸ್ಥಾನದಲ್ಲಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಎಲ್‍ಜೆಪಿಯ ಚಿರಾಗ್ ಪಾಸ್ವಾನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ಮತ ವಿಭಜಕರ ಬಗ್ಗೆ ಬಿಜೆಪಿ ನಿರ್ಧಾರ ತೆಗೆದುಕೊಳ್ಳುತ್ತದೆ.

ಸುದ್ದಿಗೋಷ್ಠಿಗೂ ಮುನ್ನ ಪಕ್ಷದ ಕಚೇರಿಗೆ ತೆರಳಿದ್ದ ನಿತೀಶ್ ಕುಮಾರ್ ಗೆದ್ದ ಎಲ್ಲ ನಾಯಕರಿಗೆ ಅಭಿನಂದನೆ ಸಲ್ಲಿಸಿದರು. ಅದರ ಜೊತೆಗೆ ಜೆಡಿಯು ಕಳಪೆ ಪ್ರದರ್ಶನದ ಕುರಿತು ಸಭೆ ನಡೆಸಿದರು. 50:50 ಅನುಪಾತದಲ್ಲಿ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿದ್ದ ನಿತೀಶ್ ಕುಮಾರ್ ಕೇವಲ 43 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ 74ರಲ್ಲಿ ವಿಜಯ ಪತಾಕೆ ಹಾರಿಸಿದ್ದು, ಎನ್‍ಡಿಎ ಕೂಟದ ವಿಐಪಿ ಮತ್ತು ಹೆಚ್‍ಎಎಂ ತಲಾ ನಾಲ್ಕರಲ್ಲಿ ಗೆದ್ದಿವೆ. 243ರ ಪೈಕಿ ಎನ್‍ಡಿಎ 125 ಸ್ಥಾನಗಳನ್ನ ಗೆಲ್ಲುವ ಮೂಲಕ ಬಹುಮತವನ್ನ ಪಡೆದುಕೊಂಡಿದೆ.

ಮಹಾಘಟಬಂಧನದ ಆರ್ ಜೆಡಿ 75, ಕಾಂಗ್ರೆಸ್ 19, ಸಿಪಿಐ ಎಂಎಲ್ 12, ಸಿಪಿಐ ಮತ್ತು ಸಿಪಿಎಂ ತಲಾ ಎರಡರಲ್ಲಿ ಗೆದ್ದಿವೆ. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ 5 ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‍ಜೆಪಿ ಒಂದು ಕ್ಷೇತ್ರದಲ್ಲಿ ಗೆದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *