ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ – ಗುಡುಗಿದ ದರ್ಶನ್

Public TV
3 Min Read

ಮೈಸೂರು: 25 ಕೋಟಿ ರೂ. ವಂಚನೆ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ. ತನಿಖೆಯಿಂದ ಮಾತ್ರ ಸತ್ಯಾಂಶ ಬರಲಿದೆ. ನಾನು ಕಾನೂನು ಸಮರ ಮಾಡಲಿದ್ದು ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಡುಗಿದ್ದಾರೆ.

ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ದೋಖಾ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ನಾನು ಸುದ್ದಿಗೋಷ್ಠಿ ನಡೆಸಬಾರದು ಎಂದು ತೀರ್ಮಾನಿಸಿದ್ದೆ. ಆದರೆ ಮಾಧ್ಯಮಗಳಲ್ಲಿ ತಪ್ಪು ಸಂದೇಶ ಪ್ರಕಟವಾಗಬಾರದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ಹೇಳಿದರು.

ದರ್ಶನ್ ಹೇಳಿದ್ದೇನು?
ಲಾಕ್ ಡೌನ್ ಸಮಯದಲ್ಲಿ ನಾನು ಮೈಸೂರಿನಲ್ಲಿದೆ. ಜೂ.6 ರಂದು ಉಮಾಪತಿ ಕರೆ ಮಾಡಿ 25 ಕೋಟಿ ರೂ.ಗೆ ನೀವು ಶ್ಯೂರಿಟಿ ಹಾಕಿದ್ರಾ ಎಂದು ಕೇಳಿದರು. ನಾನು ಇಲ್ಲ ಎಂದು ಹೇಳಿದೆ. ಇದಾದ ಬಳಿಕ ಉಮಾಪತಿ ಅವರು ಕಾನ್ಫರೆನ್ಸ್ ಕಾಲ್ ಮಾಡಿ ಬ್ಯಾಂಕ್ ಉದ್ಯೋಗಿ ಅರುಣಾ ಜೊತೆ ಮಾತನಾಡಿದರು. ಇದಾದ ಬಳಿಕ ಜೂ. 16 ರಂದು ಉಮಾಪತಿ ಅವರು ಅರುಣಾರನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಆ ಮಹಿಳೆ ನನ್ನ ಸ್ನೇಹಿತ ಹರ್ಷ ಅವರ ಹೆಸರನ್ನು ಹೇಳಿ ಸಾಲ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ನನ್ನ ಎಲ್ಲ ಸ್ನೇಹಿತರು ಮತ್ತು ಅವರ ಪತ್ನಿಯರ ಬಗ್ಗೆ ನಿಖರವಾಗಿ ಮಾತನಾಡಿದ್ದರಿಂದ ನಾನು ಆ ಮಹಿಳೆಯನ್ನು ನಂಬಿದೆ.

ಅರುಣಾ ತೋರಿಸಿದ ದಾಖಲೆಯಲ್ಲಿ ನನ್ನ ಹೆಸರು, ಪೊನ್ನಂಪೇಟೆ ವಿಳಾಸ ಮತ್ತು ಆಧಾರ್ ಕಾರ್ಡ್ ನಂಬರ್ ಇತ್ತು. ಬಳಿಕ ಅರುಣಾ ಪೊನ್ನಂಪೇಟೆಯಲ್ಲಿ ಜಾಗ ನೋಡಬೇಕು ಎಂದು ಹೇಳಿದರು. ಹೀಗಾಗಿ ಆ ಮಹಿಳೆ ಜೊತೆ ನಂದೀಶ್, ಮಧುಕೇಶ್ ಎಂಬುವವರು ಬಂದು ತೋಟ ನೋಡಿದ್ದಾರೆ. ತೋಟ ನೋಡುವ ಸಂದರ್ಭದಲ್ಲಿ ಹರ್ಷ ಅವರು ಅಲ್ಲಿದ್ದರು. ಇದನ್ನೂ ಓದಿ: ಲೋನ್ ಪಡೆಯಲು ಶ್ಯೂರಿಟಿ ಹಾಕಿ ಅಂದ್ರು, ದಾಖಲೆಗಳೇ ಇರಲಿಲ್ಲ: ಉಮಾಪತಿ

ಹರ್ಷ ಅವರನ್ನು ನೋಡಿದ ಕೂಡಲೇ ಅರುಣಾ ಶಾಕ್ ಆದರು. ನಾನು ಯಾವುದೇ ಸಾಲ ತೆಗೆದುಕೊಂಡಿಲ್ಲ ಎಂದು ಹೇಳಿದ ಹರ್ಷ ಅವರು, ಆಕೆಯ ಬ್ಯಾಂಕ್ ಐಡಿ ಕಾರ್ಡ್ ತೋರಿಸುವಂತೆ ಕೇಳಿದಾಗ ಆಕೆ ಅದು ಮೈಸೂರಿಲ್ಲಿದೆ ಎಂದು ಹೇಳಿದರು. ಆಗ ನಮಗೆ ಇದು ಈಕೆ ಬ್ಯಾಂಕ್ ಉದ್ಯೋಗಿ ಅಲ್ಲ ಎನ್ನುವುದು ದೃಢವಾಯಿತು.

ಈ ಎಲ್ಲ ವಿಚಾರ ಗೊತ್ತಾದಾಗ ಈ ಅರುಣಾ ಕುಮಾರಿ ಯಾರು ಎನ್ನುವುದನ್ನು ನಾವು ಪತ್ತೆ ಮಾಡಿದೆವು. ಅರಣಾ ಕುಮಾರ್ ಖಾಸಗಿ ಭದ್ರತಾ ಸಿಬ್ಬಂದಿಯ ಪತ್ನಿ ಎನ್ನುವುದು ತಿಳಿಯಿತು. ಈಕೆ ಪತಿಯನ್ನು ನಾವು ಸಂಪರ್ಕಿಸಿದಾಗ ಅವರು ನಾನು ಪತ್ನಿ ಕಳೆದ 4-5 ವರ್ಷದಿಂದ ಸಂಪರ್ಕದಲ್ಲಿ ಇಲ್ಲ. ಆಕೆ ಪಿಯುಸಿ ಓದಿದ್ದಾಳೆ ಎಂದು ಹೇಳಿದರು.

ಇದಾದ ಬಳಿಕ ಆಕೆಯನ್ನು ನಾವು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಗೆ ಬರುವಂತೆ ಹೇಳಿದೆವು. ಜೂನ್ 16ಕ್ಕೆ ಆಕೆ ಮನೆಗೆ ಬಂದಾಗ ನಾವು ಯಾರು ಲೋನ್ ತೆಗೆದುಕೊಂಡಿಲ್ಲ. ಎಲ್ಲವೂ ನಕಲಿ ಎನ್ನುವುದು ಗೊತ್ತಾಗಿದೆ ಎಂದಾಗ ಅರುಣಾ ನಾನು ಉಮಾಪತಿ ಕಡೆಯಿಂದ ಬಂದಿದ್ದೇನೆ. ಸತ್ಯ ಹೇಳಿದರೆ ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು. ಈ ವಿಚಾರ ತಿಳಿದು ನನಗೆ ಶಾಕ್ ಆಯ್ತು.

ಉಮಾಪತಿಯವರನ್ನು ಸಂಪರ್ಕಿಸಿದಾಗ ನನಗೆ ಆಕೆ ಫೇಸ್‍ಬುಕ್ ಪರಿಚಯ ಎಂದು ಹೇಳಿದ್ದರು. ಎಲ್ಲವೂ ಗೊಂದಲ ಇರುವುದರಿಂದ ನಾನು ಉಮಾಪತಿಯವರಿಗೆ ದೂರು ನೀಡಲು ಹೇಳಿದ್ದೇನೆ ಎಂದು ವಿವರಿಸಿದರು.

ಈ ವೇಳೆ ಮಾಧ್ಯಮದವರು ಉಮಾಪತಿಯವರು ಈ ಪ್ರಕರಣದಲ್ಲಿ ಇದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ನನಗೆ ಗೊತ್ತಿಲ್ಲ. ನಾವಿಬ್ಬರು ಉತ್ತಮ ಸ್ನೇಹಿತರು. ರಾಬರ್ಟ್ ಸಿನಿಮಾವನ್ನು ಅವರೇ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಎರಡು ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಮಹಿಳೆ ಜೊತೆ ಏಪ್ರಿಲ್‍ನಿಂದ ಉಮಾಪತಿಯವರು ಚಾಟ್ ಮಾಡಿದ್ದಾರೆ. ಯಾರಿದ್ದಾರೆ ಎನ್ನುವುದು ತನಿಖೆಯಿಂದ ದೃಢಪಡಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *