ಯಾದಗಿರಿಯಲ್ಲಿ ಭಾರೀ ಮಳೆ- ಸಿಡಿಲಿಗೆ ಹಸು ಸಾವು, ಗೋಡೆ ಕುಸಿದು 10ಕ್ಕೂ ಹೆಚ್ಚು ಬೈಕ್‍ಗಳು ಜಖಂ

Public TV
1 Min Read

– ನಾನಾ ಅನಾಹುತ ಸೃಷ್ಟಿಸಿದ ಬಿರುಗಾಳಿ ಸಹಿತ ಮಳೆ

ಯಾದಗಿರಿ: ಉರಿ ಬಿಸಿಲಿಗೆ ಕಾದು ಕೆಂಡದಂತಾಗಿದ್ದ ಜಿಲ್ಲೆಗೆ ಮಳೆರಾಯ ತಂಪೆರೆದಿದ್ದು, ಇದರೊಂದಿಗೆ ಹಲವು ಅನಾಹುತಗಳನ್ನು ಸಹ ಸೃಷ್ಟಿಸಿದ್ದಾನೆ. ಸಿಡಿಲಿಗೆ ಹಸು ಬಲಿಯಾಗಿದ್ದು, ಭಾರೀ ಮಳೆಗೆ ಗೋಡೆ ಕುಸಿದು ಹತ್ತಕ್ಕೂ ಹೆಚ್ಚು ಬೈಕ್‍ಗಳು ಜಖಂಗೊಂಡಿವೆ.

ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಒಂದು ಗಂಟೆಗೂ ಅಧಿಕ ಕಾಲ ಸುರಿದ ಗುಡುಗು ಸಹಿತ ಮಳೆ ಜಿಲ್ಲೆಯಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ. ಸುಭಾಷ್ ಚೌಕ್ ಬಳಿಯ ಉಳ್ಳೆಸೂಗುರ್ ಕಾಂಪ್ಲೇಕ್ಸ್ ನಲ್ಲಿ ಹೊಸದಾಗಿ ಕಟ್ಟುತ್ತಿದ್ದ ಮೇಲ್ಛಾವಣಿ ಕುಸಿದಿದ್ದು, ಓರ್ವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಟ್ಟಡದ ಕೆಳಗಡೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್‍ಗಳು ಜಖಂಗೊಂಡಿವೆ.

ಬೀದಿ ಬದಿ ವ್ಯಾಪಾರಸ್ಥರ ತಳ್ಳುವ ಗಾಡಿ, ಹೂವು ಹಣ್ಣುಗಳ ಗಾಡಿಯ ಮೇಲೆ ಸಹ ಗೋಡೆ ಬಿದ್ದಿದೆ. ನಗರಸಭೆ ಕಚೇರಿ ಸಭಾಂಗಣದ ಮೇಲ್ಛಾವಣಿ ಸಹ ಕುಸಿದಿದೆ. ಸಭಾಂಗಣದಲ್ಲಿದ್ದ ಖುರ್ಚಿ, ಟೇಬಲ್ ಗಳು ಜಖಂಗೊಂಡಿವೆ.

ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ಜಮೀನಿನಲ್ಲಿದ್ದ ಹಸು ಸಿಡಿಲಿಗೆ ಬಲಿಯಾಗಿದೆ. ಗ್ರಾಮದ ರೈತ ನಾಗಪ್ಪ ಅವರಿಗೆ ಸೇರಿದ ಹಸು ಇದಾಗಿದೆ. ವಿದ್ಯುತ್ ಕಂಬಗಳು ಸಹ ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಮರಗಳು ಸಹ ಧರೆಗುರುಳಿವೆ.

ಉರಿ ಬಿಸಿಲಿಗೆ ಬಳಲಿ ಬೆಂಡಾಗಿದ್ದ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಕಾದು ಕೆಂಡವಾಗಿದ್ದ ಗಿರಿನಾಡು ಗುಡುಗು ಸಹಿತ, ಗಾಳಿ ಮಳೆಗೆ ತಂಪಾಗಿದೆ. ಆದರೆ ಅನಾಹುತಗಳೂ ಸಂಭವಿಸಿವೆ.

ಮಳೆಯ ರಭಸಕ್ಕೆ ತಗ್ಗು ಪ್ರದೇಶಗಳಲ್ಲಿ ಮತ್ತು ಯಾದಗಿರಿ ನಗರದ ಕನಕದಾಸ ವೃತ್ತ, ಪದವಿ ಕಾಲೇಜು ವೃತ್ತ ಮತ್ತು ಸುಭಾಷ್ ವೃತ್ತದ ಅಂಗಡಿ-ಮಳಿಗಳಿಗೆ ನೀರು ನುಗ್ಗಿದೆ. ಕಳೆದ ಒಂದು ತಿಂಗಳಿಂದ 40 ಡಿಗ್ರಿ ಗರಿಷ್ಠ ತಾಪಮಾನದ ಬಿಸಿಲಿಗೆ ಹೈರಾಣಾಗಿದ್ದ ಜನ ಸ್ವಲ್ಪ ಮಟ್ಟಿಗೆ ಸಂತಸಗೊಂಡಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ರೈತರು ಬೆಳೆ ಹಾನಿಯಾಗುವ ಆತಂಕದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *