ಯಶಸ್ಸನ್ನು ತಲೆಗೇರಿಸಿಕೊಳ್ಳಬೇಡ- ಪಡಿಕ್ಕಲ್‍ಗೆ ಕೊಹ್ಲಿ ಸಲಹೆ

Public TV
1 Min Read

ಮುಂಬೈ: ಯಶಸ್ಸನ್ನು ಯಾವುದೇ ಕಾರಣಕ್ಕೂ ತಲೆಗೇರಿಸಿಕೊಳ್ಳದೆ ಶ್ರಮವಹಿಸಬೇಕಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅವರು ಸಲಹೆ ನೀಡಿದ್ದರು ಎಂದು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ತಿಳಿಸಿದ್ದಾರೆ.

ಐಪಿಎಲ್ 2020ರ ಆವೃತ್ತಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿರುವ ಪಡಿಕ್ಕಲ್, ಮಾಧ್ಯಮಗಳೊಂದಿಗೆ ಮಾತನಾಡಿ ಇದು ಆರಂಭ ಮಾತ್ರ. ನನ್ನ ಆಟ ಮತ್ತಷ್ಟು ಸುಧಾರಿಸಿಕೊಳ್ಳಬೇಕಿದೆ. ಇನ್ನಿಂಗ್ಸ್ ಆರಂಭ ಮಾಡುವ ವಿಚಾರದಲ್ಲಿ ಸಾಕಷ್ಟು ಸಹಾಯ ಮಾಡಿದ್ದರು. ಯಶಸ್ಸನ್ನು ತಲೆಗೇರಿಕೊಳ್ಳದೆ ಶ್ರಮವಹಿಸಿಬೇಕು. ದೇಶಕ್ಕಾಗಿ ಆಡಬೇಕು ಎಂಬ ಅಲೋಚನೆಗಳನ್ನು ಬಿಟ್ಟು ಕೇವಲ ನಿನ್ನ ಆಟವನ್ನು ಎಂಜಾಯ್ ಮಾಡುತ್ತಾ ಮುಂದೇ ಸಾಗು. ಎಲ್ಲವೂ ನಡೆಯಬೇಕಾದ ಸಂದರ್ಭದಲ್ಲಿ ನಡೆಯುತ್ತದೆ ಎಂದು ಸಲಹೆ ನೀಡಿದ್ದರು ಎಂದು ಪಡಿಕ್ಕಲ್ ತಿಳಿಸಿದ್ದಾರೆ.

ಹಿರಿಯ ಆಟಗಾರರಿಂದ ಸಾಕಷ್ಟು ಕಲಿತಿದ್ದೇನೆ. ಸಂಕಷ್ಟದ ಸಂದರ್ಭಗಳನ್ನು ಎದುರಿಸುವ ವಿಚಾರದಲ್ಲಿ ನನ್ನ ದೃಷ್ಟಿಕೋನವೂ ಬದಲಾಗಿದೆ. ಹಿರಿಯ ಆಟಗಾರರು ಪಂದ್ಯದ ಫಲಿತಾಂಶದ ಬಗ್ಗೆ ಸಂಬಂಧವಿಲ್ಲದೇ ಸ್ಥಿರ ಪ್ರದರ್ಶನ ನೀಡುವತ್ತ ಗಮನ ನೀಡುತ್ತಾರೆ. ಗೆಲುವು ಪಡೆದರೆ ಹೆಮ್ಮೆ ಪಟ್ಟು ಹಿಗ್ಗಿ ಹೋಗುವುದಿಲ್ಲ, ಸೋತರೆ ಕುಗ್ಗುವುದಿಲ್ಲ. ಇದು ನನಗೆ ಪ್ರೇರಣೆಯಾಗಿದೆ ಎಂದು ಪಡಿಕ್ಕಲ್ ಹೇಳಿದ್ದಾರೆ.

2020ರ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಆರ್ ಸಿಬಿ ತಂಡದಲ್ಲಿ ಪಡಿಕ್ಕಲ್ ಹೆಚ್ಚು ಗಮನ ಸೆಳೆದರು. 15 ಪಂದ್ಯಗಳನ್ನು ಟೂರ್ನಿಯಲ್ಲಿ ಆಡಿರುವ ಯುವ ಆಟಗಾರ 473 ರನ್ಸ್ ಗಳಿಸಿದ್ದು, ಪಾದಾರ್ಪಣೆ ಮಾಡಿದ ವರ್ಷದಲ್ಲೇ ಅತ್ಯಧಿಕ ರನ್ ಗಳಿಸಿದ ಶ್ರೇಯಸ್ ಅಯ್ಯರ್ ದಾಖಲೆಯನ್ನು ಅಳಿಸಿ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *