ಯಲಹಂಕ ಮೇಲ್ಸೇತುವೆಗೆ ‘ಸಾವರ್ಕರ್’ ಹೆಸರು- ಉದ್ಘಾಟನಾ ಕಾರ್ಯಕ್ರಮ ಮುಂದೂಡಿದ ಸರ್ಕಾರ

Public TV
2 Min Read

– ವಿಪಕ್ಷಗಳ ಟೀಕೆಗೆ ಮಣಿಯಿತಾ ಸಿಎಂ ಬಿಎಸ್‍ವೈ ಸರ್ಕಾರ?

ಬೆಂಗಳೂರು: ಗುರುವಾರ ಸಾವರ್ಕರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟು ನಾಳೆ ಉದ್ಘಾಟನೆ ಮಾಡಲು ಬಿಬಿಎಂಪಿ ಕೌನ್ಸಿಲ್‍ನಲ್ಲಿ ನಿರ್ಧಾರ ಮಾಡಲಾಗಿತ್ತು. ಆದರೆ ವಿವಾದ ಆಗುವುದು ಬೇಡ ಅಂತ ಕೊರೊನಾ ನೆಪದಲ್ಲಿ ಉದ್ಘಾಟನೆ ಕಾರ್ಯಕ್ರಮವನ್ನೇ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಇದಕ್ಕೂ ಮುನ್ನ ನಾಳಿನ ಸೇತುವೆ ಉದ್ಘಾಟನೆಗೆ ಮುದ್ರಿಸಲಾಗಿದ್ದ ಆಮಂತ್ರಣ ಪತ್ರಿಕೆಯಲ್ಲಿ ಸಾವರ್ಕರ್ ಅವರ ಹೆಸರನ್ನು ಸರ್ಕಾರ ಕೈ ಬಿಟ್ಟಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಬರಿ ಮೇಲ್ಸೇತುವೆ ಉದ್ಘಾಟನೆ ಎಂದು ಮುದ್ರಿಸಲಾಗಿತ್ತು. ಇತ್ತ ಮೇಲ್ಸೇತುವೆಗೆ ಸಾರ್ವಕರ್ ಅವರ ಹೆಸರಿಡಲು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಅಂದಹಾಗೇ ಸರ್ಕಾರ ಆಮಂತ್ರಣ ಪತ್ರಿಕೆಯಲ್ಲಿ ಸಾವರ್ಕರ್ ಅವರ ಹೆಸರು ಕೈ ಬಿಡಲು ರಾಜ್ಯ ಸರ್ಕಾರ ಅಧಿಕೃತವಾಗಿ ಗೆಜೆಟ್‍ನಲ್ಲಿ ಸಾವರ್ಕರ್ ಹೆಸರು ಹೊರಡಿಸದಿರುವುದೇ ಕಾರಣ ಎನ್ನಲಾಗಿತ್ತು. ಅಲ್ಲದೇ ಉದ್ಘಾಟನೆ ವೇಳೆ ಸಾವರ್ಕರ್ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸಿಎಂ ಘೋಷಣೆ ಮಾಡುತ್ತಾರೆ ಎನ್ನಲಾಗಿತ್ತು.

ಮೇಲ್ಸೇತುವೆಗೆ ಸಾವರ್ಕರ್ ಹೆಸರು ಬೇಡ ಎಂದು ಕುಮಾರಸ್ವಾಮಿ ಅವರು ವಿರೋಧ ಮಾಡಿದ್ದರು. ಕಾಂಗ್ರೆಸ್ ಪಕ್ಷ ನಾಯಕರು ಕೂಡ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಇತ್ತ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಸಮರ್ಥನೆ ಮಾಡಿಕೊಂಡಿದ್ದು, ಸ್ವಾತಂತ್ರ್ಯ ಸೇನಾನಿಗಳಾಗಿದ್ದ ಶ್ರೀ ವೀರ ಸಾವರ್ಕರ್ ಅವರ ಹೆಸರನ್ನು ಬೆಂಗಳೂರಿನ ಮೇಲ್ಸೇತುವೆಯೊಂದಕ್ಕೆ ನಾಮಕರಣ ಮಾಡುವ ಸಂಬಂಧ ನಮ್ಮ ಸರ್ಕಾರ ಸೂಕ್ತವಾದ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರವನ್ನು ವಾಸ್ತವವಾಗಿ ಎಲ್ಲಾ ಪಕ್ಷಗಳೂ ಸ್ವಾಗತಿಸ ಬೇಕಾಗಿತ್ತು. ಆದರೆ ದುರದೃಷ್ಟವಶಾತ್ ವಿರೋಧ ಪಕ್ಷಗಳು ಇದರಲ್ಲಿಯೂ ರಾಜಕೀಯದ ಅಪಸ್ವರ ಎತ್ತುತ್ತಾ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ನಡೆಸುತ್ತಿರುವುದು ಖಂಡನೀಯ.

ವೀರ ಸಾವರ್ಕರ್ ಅವರು ಬ್ರಿಟಿಷರ ವಿರುದ್ಧ ಹೋರಾಡಿ ಸೆರೆವಾಸ ಅನುಭವಿಸಿದ ರಾಷ್ಟ್ರ ಭಕ್ತರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಿದ್ದರೆ ಸಾವರ್ಕರ್ ಅವರು ಎಷ್ಟೊಂದು ಧೀರ, ಅಪ್ರತಿಮ ಹೋರಾಟಗಾರ ಎಂಬುದು ಇವರಿಗೆ ಅರ್ಥವಾಗುತ್ತಿತ್ತು ಇಂತಹ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಿಡದೆ ಮತ್ತೆ ಶ್ರೀಮತಿ ಸೋನಿಯಾ ಗಾಂಧಿಯವರ ಹೆಸರನ್ನಿಡಬೇಕಿತ್ತೇ? ವಿರೋಧ ಪಕ್ಷದವರಿಗೆ ರಾಜಕೀಯ ಮಾಡಲು ಬೇಕಾದಷ್ಟು ಇತರ ವಿಷಯಗಳಿವೆ. ಆದರೆ ಸ್ವಾತಂತ್ರ ಹೋರಾಟಗಾರರ ವಿಷಯದಲ್ಲೂ ರಾಜಕೀಯ ಬೆರೆಸುತ್ತಿರುವುದು ಯಾರ ಓಲೈಕೆಗೆ? ಇನ್ನಾದರೂ ರಾಷ್ಟ್ರಭಕ್ತರ ವಿಚಾರದಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲಿ ವಿರೋಧಪಕ್ಷಗಳ ಮುಖಂಡರು ರಾಜಕೀಯ ಮಾಡದೇ ಗೌರವಪೂರ್ವಕವಾಗಿ ನಡೆದುಕೊಳ್ಳುವುದನ್ನು ಕಲಿಯುತ್ತಾರೆ ಎಂದು ನಿರೀಕ್ಷಿಸಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *