ಯಲಹಂಕ ಬಳಿ ಟಿಂಬರ್ & ಟೆಂಡರ್ ಮಾಫಿಯಾ: AAP

Public TV
2 Min Read

– ಎಸ್.ಆರ್.ವಿಶ್ವನಾಥ್ ಅಧಿಕಾರ ದುರ್ಬಳಕೆ

ಬೆಂಗಳೂರು: ಯಲಹಂಕದ ಸಿಂಗನಾಯಕನಹಳ್ಳಿ ಕೆರೆಗೆ ಇಂದು ಆಮ್ ಆದ್ಮಿ ಪಕ್ಷದ ನಿಯೋಗ ಭೇಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿತು. 265 ಎಕರೆಗಳ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಸಿಂಗನಾಯಕನಹಳ್ಳಿ ಕೆರೆಯ ಪುನರುತ್ಥಾನ ಕಾರ್ಯ ಇದುವರೆವಿಗೂ ಆಗದಿರುವುದು ನೋವಿನ ಸಂಗತಿ. ಪ್ರಭಾವಿಗಳ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಹಲವು ಎಕರೆಗಳು ತುತ್ತಾಗಿದ್ದು ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ಆಗಬೇಕಿದೆ.

ಕೆರೆಯಲ್ಲಿ 50 ವರ್ಷಗಳ ಹಳೆಯ 7500 ಕ್ಕೂ ಹೆಚ್ಚು ಜಾಲಿ ಮರಗಳು ಬೆಳೆದಿದ್ದು ಇವುಗಳ ಸಂರಕ್ಷಣೆ ಕಾರ್ಯವು ಸಹ ಆಗಬೇಕಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಯಾವುದೇ ಜೀವಿಯ ಹತ್ಯೆಗಳು ಆಗಬಾರದು. ಕೋಟ್ಯಾಂತರ ರೂಪಾಯಿಗಳ ಬೆಲೆಬಾಳುವ ಈ ಜಾಲಿ, ಹೊಂಗೆ, ಬೇವು ಮರಗಳನ್ನು ಟಿಂಬರ್ ಮಾಫಿಯಾಗಳಿಗೆ ಮತ್ತು ಕೆರೆ ಅಭಿವೃದ್ಧಿ ಹೆಸರಿನಲ್ಲಿ ಆಗುವ ನೂರಾರು ಕೋಟಿ ಟೆಂಡರ್ ಗಳಿಗೆ ಬಲಿ ನೀಡಲು ಯಾವುದೇ ಕಾರಣಕ್ಕೂ ಆಮ್ ಆದ್ಮಿ ಪಕ್ಷವು ಬಿಡುವುದಿಲ್ಲ ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಎಚ್ಚರಿಸಿದರು.

ಈ ಕೆರೆಯಲ್ಲಿ ನವಿಲು, ನರಿ ಮುಂತಾದ ಪಕ್ಷಿಗಳು ಹಾಗೂ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ಬೆಳೆದಿರುವ ಮರಗಳನ್ನು ಉಳಿಸಿಕೊಂಡೇ ಕೆರೆಯ ಹೂಳನ್ನು ಎತ್ತುವಂತಹ ವೈಜ್ಞಾನಿಕ ಕ್ರಮಗಳು ಈಗಾಗಲೇ ಇವೆ. ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸಸ್ಯಶಾಸ್ತ್ರದ ವಿಜ್ಞಾನಿಗಳ ಸಮಿತಿಯ ಶಿಫಾರಸ್ಸುಗಳನ್ನು ತೆಗೆದುಕೊಂಡು ಪರಿಸರವನ್ನು ಉಳಿಸಬೇಕಾಗಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು ಇದೇ ರೀತಿ ಕೆರೆಗಳಲ್ಲಿ ಇರುವ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಿ ವೈಜ್ಞಾನಿಕವಾಗಿ ಕೆರೆಗಳು ಮತ್ತು ಮರಗಳನ್ನು ಸಹ ಪುನರುಜ್ಜೀವನಗೊಳಿಸಿರುವ ಉದಾಹರಣೆಗಳು ಸಾಕಷ್ಟಿವೆ. ಅದನ್ನು ಬಿಟ್ಟು ಸ್ಥಳೀಯ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಟಿಂಬರ್ ಮಾಫಿಯಾಗಳ ಪರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉಚಿತವಲ್ಲ ಎಂದು ಎಚ್ಚರಿಸಿದರು. ಪರಿಸರ ಸಂರಕ್ಷಣೆಗಾಗಿ ಮುಂದಿನ ಪೀಳಿಗೆಗಳಿಗೆ ಕೆರೆಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಮೋಹನ್ ದಾಸರಿ ತಿಳಿಸಿದರು.

ಯಲಹಂಕ ವಿಧಾನಸಭೆಯ ಪಕ್ಷದ ಮುಖಂಡರಾದ ಫಣಿರಾಜ್ ಮಾತನಾಡುತ್ತಾ, ಕೆ ಸಿ ವ್ಯಾಲಿ ನೀರನ್ನು ಸಿಂಗನಾಯಕನಹಳ್ಳಿ ಕೆರೆಗೆ ಹರಿಸುವ ಶಾಸಕರ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈಗಾಗಲೇ ಕೋಲಾರ – ಚಿಕ್ಕಬಳ್ಳಾಪುರ ಭಾಗದ ರೈತರುಗಳು ಕೆಸಿ ವ್ಯಾಲಿ ನೀರಿನ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಆತಂಕಗೊಳಗಾಗಿದ್ದಾರೆ. ಈ ಕೂಡಲೇ ಒತ್ತುವರಿಯಾಗಿರುವ ಕೆರೆ ಹರಿವು ಜಾಗಗಳನ್ನು ತೆರವುಗೊಳಿಸಿದರೆ ಸರಾಗವಾಗಿ ಕೆರೆಗೆ ನೀರು ತುಂಬುತ್ತದೆ ಎಂದು ತಿಳಿಸಿದರು. ಸರ್ಕಾರವು ಈ ಕೂಡಲೇ ವಿಜ್ಞಾನಿಗಳ ಸಮಿತಿಯನ್ನು ರಚಿಸಿ ಸೂಕ್ತ ಹಾಗೂ ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *