ಯತ್ನಾಳ್‍ಗೆ ಮತಿಭ್ರಮಣೆಯಾಗಿದೆ ರೇಣುಕಾಚಾರ್ಯ ಕಿಡಿ

Public TV
1 Min Read

ದಾವಣಗೆರೆ: ಯಡಿಯೂರಪ್ಪನವರು ಸಿಎಂ ಪದವಿ ಉಳಿಸಿಕೊಳ್ಳಲು 2 ಸಾವಿರ ಕೋಟಿ ಕೊಡುತ್ತೇವೆ ಎಂದು ಹೈಕಮಾಂಡ್ ಬಳಿ ಹೋಗಿದ್ದರು ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಮತಿಭ್ರಮಣೆಯಾಗಿದೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಯತ್ನಾಳ್ ಹೇಳಿಕೆಯ ಕುರಿತು ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ ಅವರು, ಯತ್ನಾಳ್ ಒಬ್ಬ ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿ. ಅವರಿಗೆ ಮತಿ ಭ್ರಮಣೆಯಾಗಿದೆ ಅವರ ಮಾತಿಗೆ ಮಹತ್ವ ಕೊಡಬೇಕಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ. ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿಯವರನ್ನು ಭೇಟಿಯಾಗಲು ಹೋಗಿದ್ದರು. ಕೇಂದ್ರದ ವರಿಷ್ಠರು ಕೂಡ ಬಿಎಸ್‍ವೈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಯ ನೇತೃತ್ವ ವಹಿಸಲು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಯಾವುದೇ ಕಾರಣಕ್ಕೂ ಉದ್ಭವಿಸಲ್ಲ. ಅಲ್ಲದೆ ಜುಲೈ 26ಕ್ಕೆ ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಸಿಎಂ ಮಾಡಿ ಅಂದವರಿಗೆ ಮೋದಿ ಕಪಾಳಕ್ಕೆ ಹೊಡಿತಾರೆ: ಯತ್ನಾಳ್

ನಾನು ಇವತ್ತು ರಾತ್ರಿ ಬೆಂಗಳೂರಿಗೆ ಹೋಗುತ್ತೇನೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಅಲ್ಲದೆ ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್ ಕುಮಾರ್, ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಅಂತಹ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರ ಆಡಿಯೋ ವೈರಲ್ ಆಗಿದೆ ಎಂದು ಸುದ್ದಿ ಹರಿದಾಡಿತು. ನಾನು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಅವರಿಗೆ ಕರೆ ಮಾಡಿದ್ದೆ ಅದು ಫೇಕ್ ಆಡಿಯೋ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಆಗಲಿ ಎಂದು ಪತ್ರ ಬರೆದಿದ್ದಾರೆ. ಆಡಿಯೋದಲ್ಲಿ ಇರೋದು ಅವರ ಧ್ವನಿ ಅಲ್ಲ ಅಂತ ನನಗೂ ವಿಶ್ವಾಸ ಇದೆ. ಅವರು ಕೂಡ ತನಿಖೆಗೆ ಆಗಲಿ ಎಂದಿದ್ದಾರೆ. ಅಲ್ಲದೆ ಜುಲೈ 26 ಕ್ಕೆ ಬಿಜೆಪಿ ಸರ್ಕಾರ ಬಂದು 2 ವರ್ಷ ಪೂರೈಸುತ್ತಿರುವ ಹಿನ್ನಲೆ ಎಲ್ಲಾ ಶಾಸಕ, ಸಚಿವರಿಗೆ ಸಿಎಂ ಔತಣ ಕೂಟವನ್ನು ಏರ್ಪಡಿಸಿದ್ದಾರೆ. ಅದರೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎಂದು ವರದಿಯಾಗುತ್ತಿದೆ. ಅದರೆ ಶಾಸಕಾಂಗದ ಸಭೆ ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *