ಮೋಸ ಮಾಡಿದವನ ಮೇಲಿನ ಪ್ರತೀಕಾರಕ್ಕೆ ಮಗನ ಕಿಡ್ನ್ಯಾಪ್- ನಾಲ್ವರು ಅಂದರ್

Public TV
1 Min Read

ಚಿಕ್ಕಬಳ್ಳಾಪುರ: ಎರಡೂವರೆ ಲಕ್ಷ ರೂ. ಪಡೆದು ಫೇಕ್ ರೈಸ್ ಪುಲ್ಲಿಂಗ್ ಚೆಂಬು ನೀಡಿ ಮೋಸ ಮಾಡಿದ ಎಂದು ಆತನ ಮಗನನ್ನೇ ಅಪಹರಿಸಿದ ನಾಲ್ವರನ್ನು ಪೊಲೀಸರು ಬಂಧಿಸಿ, ಬಾಲಕನನ್ನ ರಕ್ಷಣೆ ಮಾಡಿದ್ದಾರೆ.

ದಾಮೋದರ್ ಹಾಗೂ ಈತನ ಸಹಚರರಾದ ಮುತ್ತು ಶೆಟ್ಟಿ ಮಣಿಕುಮಾರ್, ಶೇಕ್ ಭಾಷಾ, ಜಾಸ್ಸಿ ಲೋಕೇಶ್ ಕುಮಾರ್ ಬಂಧಿತ ಆರೋಪಿಗಳು. ದೇವಗಾನಹಳ್ಳಿ ಗ್ರಾಮಕ್ಕೆ ಪಾಪಣ್ಣನನ್ನು ಹುಡುಕಿಕೊಂಡು ಬಂದ ದಾಮೋದರ್ ಹಾಗೂ ಈತನ ಸಹಚರರಾದ ಮುತ್ತು ಶೆಟ್ಟಿ ಮಣಿಕುಮಾರ್, ಶೇಕ್ ಭಾಷಾ, ಜಾಸ್ಸಿ ಲೋಕೇಶ್ ಕುಮಾರ್, ಪಾಪಣ್ಣನ 14 ವರ್ಷದ ಮಗನನ್ನು ಜಮೀನು ಬಳಿ ಇರುವ ನಿಮ್ಮ ತಂದೆಯನ್ನ ತೋರಿಸು ಬಾ ಎಂದು ಕಾರಿನಲ್ಲಿ ಕೂರಿಸಿಕೊಂಡು ತಿರುಪತಿಗೆ ಕರೆದೊಯ್ದು, ಲಾಡ್ಜ್ ನಲ್ಲಿ ಬಾಲಕನ ಕಾಲಿಗೆ ಚೈನ್ ಹಾಕಿ ಕಟ್ಟಿ ಹಾಕಿದ್ದಾರೆ.

ನಂತರ ಪಾಪಣ್ಣನಿಗೆ ಕರೆ ಮಾಡಿ ನಿನ್ನ ಮಗ ನಮ್ಮ ಹತ್ತಿರ ಇದ್ದಾನೆ ಬಿಡಬೇಕು ಎಂದರೆ ನಾವು ಕೊಟ್ಟಿರುವ ಎರಡೂವರೆ ಲಕ್ಷ ರೂ. ಹಣ ತೆಗೆದುಕೊಂಡು ಬಾ ಎಂದು ಅವಾಜ್ ಹಾಕಿದ್ದಾನೆ. ಈ ಸಂಬಂಧ ಬಾಲಕನ ತಾಯಿ ಗೌರಿಬಿದನೂರು ಪೊಲೀಸರಿಗೆ ದೂರು ನೀಡಿದ್ದು, ಬಾಲಕನ ರಕ್ಷಣೆಗೆ ಕಾರ್ಯಾಚರಣೆಗಿಳಿದ ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ನೇತೃತ್ವದ ತಂಡ, ತಿರುಪತಿಯ ಲಾಡ್ಜ್ ನಲ್ಲಿ ಬಾಲಕನನ್ನ ಕೂಡಿ ಹಾಕಿದ್ದ ನಾಲ್ವರನ್ನ ಬಂಧಿಸಿ, ಬಾಲಕನನ್ನು ಸುರಕ್ಷಿತವಾಗಿ ವಾಪಾಸ್ ಕರೆತಂದಿದ್ದಾರೆ. ಸಿನಿಮೀಯ ಸ್ಟೈಲಲ್ಲಿ ಗೌರಿಬಿದನೂರು ಪೊಲೀಸರು ಹಾಗೂ ಚಿಂತಾಮಣಿ ಪೊಲೀಸರು ಸಾಕಷ್ಟು ಪರಿಶ್ರಮ ಹಾಕಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.

ಕಿಡ್ನ್ಯಾಪ್ ಆಗಿದ್ದೇಕೆ?
ಗೌರಿಬಿದನೂರು ತಾಲೂಕು ದೇವಗಾನಹಳ್ಳಿ ಗ್ರಾಮದ ಪಾಪಣ್ಣ, ಹಿಂದೂಪುರ ಮೂಲದ ರಮೇಶ್, ಕಾಟನಕಲ್ಲು ಗ್ರಾಮದ ನಂಜುಂಡಪ್ಪ, ಕಡಗತ್ತೂರು ಗ್ರಾಮದ ನಾಗಪ್ಪ ಈ ನಾಲ್ವರು ಸೇರಿ ಆಂಧ್ರ ಮೂಲದ ದಾಮೋದರಂಗೆ ನಕಲಿ ರೈಸ್ ಪುಲ್ಲಿಂಗ್ ಚೆಂಬು ನೀಡಿ ಎರಡೂವರೆ ಲಕ್ಷ ಹಣ ಪಡೆದು ಮೋಸ ಮಾಡಿದ್ದರು. ಮೋಸ ಹೋದ ವಿಷಯ ತಿಳಿದ ದಾಮೋದರ್ ಹಣ ವಾಪಾಸ್ ಮಾಡುವಂತೆ ದುಂಬಾಲು ಬಿದ್ದಿದ್ದಾರೆ. ಆದರೆ ಈ ನಾಲ್ವರು ಹಣ ವಾಪಾಸ್ ಕೊಟ್ಟಿರಲಿಲ್ಲ. ಹೀಗಾಗಿ ಪಾಪಣ್ಣನ ಮಗನನ್ನು ಅಪಹರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *