ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ತನುಶ್ರೀ ವಿಶ್ವದಾಖಲೆ

Public TV
2 Min Read

-ನಿಮಿಷಕ್ಕೆ 55 ಬಾರಿ ಆಸನ ಪೂರೈಸಿದ ಪಬ್ಲಿಕ್ ಹೀರೋ

ಉಡುಪಿ: ಒಂದು ರಾಷ್ಟ್ರ ದಾಖಲೆ ಮಾಡೋದಕ್ಕೆ ಜೀವಮಾನದ ಸಾಧನೆ ಬೇಕಾಗುತ್ತೆ. ಉಡುಪಿಯ ತನುಶ್ರೀಗೆ ದಾಖಲೆಗಳನ್ನು ಮಾಡುವುದು ಎಂದರೆ ನೀರು ಕುಡಿದಷ್ಟೇ ಸುಲಭ. ವಯಸ್ಸು 11 ದಾಟುವ ಮೊದಲೇ ನಮ್ಮ ಪಬ್ಲಿಕ್ ಹೀರೋ ಬರೋಬ್ಬರಿ 6 ವಿಶ್ವದಾಖಲೆ ಮುಡಿಗೇರಿಸಿಕೊಂಡು ಮಿಂಚಿದ್ದಾಳೆ.

ಉಡುಪಿಯ ಸೈಂಟ್ ಸಿಸಲೀಸ್ ಹೈಸ್ಕೂಲಿನ ಆರನೇ ತರಗತಿಯ ತನುಶ್ರೀ, ಇದೀಗ ಆರನೇ ವಿಶ್ವ ದಾಖಲೆ ಮಾಡಿದ್ದಾಳೆ. ಒಂದು ನಿಮಿಷದಲ್ಲಿ 55 ಬಾರಿ ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡಿ ದಾಖಲೆ ಮುಡಿಗೇರಿಸಿಕೊಂಡಿದ್ದಾಳೆ. ಸೈಂಟ್ ಸಿಸಲೀಸ್ ಸಭಾಂಗಣದಲ್ಲಿ ನೂರಾರು ಜನರು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರರ ನಡುವೆ ತನುಶ್ರೀ ಪಿತ್ರೋಡಿ ಸಲೀಸಾಗಿಯೇ ಈ ರೆಕಾರ್ಡ್ ಮಾಡಿದ್ದಾಳೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಡಾ. ಮನೀಶ್ ಬಿಷ್ಶೋಯ್ ಮಾತನಾಡಿ, ಈವರೆಗೆ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ರೆಕಾರ್ಡ್ ಅಟೆಮ್ಟ್ ಮಾಡಿಲ್ಲ. ದುಬೈ ಯುವತಿ ಫ್ರಂಟ್ ಬಾಡಿ ಸ್ಕಿಪ್ ಮಾಡಿದ್ದಳು. ಈ ಆಸನ ಬಹಳ ಕಷ್ಟಕರ. ತನುಶ್ರೀ ದೇಹದಲ್ಲಿ ಮೂಳೆ ಇಲ್ಲವೇನೋ ಎಂಬ ರೀತಿಯಲ್ಲಿ ಒಂದು ನಿಮಿಷಗಳಲ್ಲಿ 55 ಬಾರಿ ಆಸನ ಪೂರೈಸಿದ್ದಾಳೆ ಎಂದರು.

ಆರು ವಿಶ್ವ ದಾಖಲೆ ಮಾಡಿದ ತನುಶ್ರೀ ಪಿತ್ರೋಡಿ
ನಮ್ಮ ಪಬ್ಲಿಕ್ ಹೀರೋ ಆಗಿರುವ ತನುಶ್ರೀ, 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನ, 2018ರಲ್ಲಿ ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇಂಟೇನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೋಸಿಶನ್ ಭಂಗಿ, 2019ರಲ್ಲಿ ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಪೋಸ್ಚರ್ ಹಾಗೂ 2020 ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀಟರ್ ಅಂತರವನ್ನು 1.14 ಸೆಕುಂಡಿನಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಳು. ಹೊಸ ದಾಖಲೆಗೆ ಕೊರೊನಾ ರಜೆಯನ್ನು ಬಳಸಿಕೊಂಡು ತನುಶ್ರೀ ಪ್ರ್ಯಾಕ್ಟೀಸ್ ಮಾಡಿದ್ದಳು.

ತನುಶ್ರೀ ಪಿತ್ರೋಡಿ ಮಾತನಾಡಿ, ಲಾಕ್‍ಡೌನ್ ಸಂದರ್ಭದಲ್ಲಿ ಪ್ರ್ಯಾಕ್ಟಿಸ್ ಮಾಡಿದೆ. 50, 51 ಬಾರಿ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡುತ್ತಿದ್ದೆ. ಜನರು ಹುರುದುಂಬಿಸುತ್ತಿರುವಾಗ ಜೋಷ್ ಬಂತು. ನನ್ನ ತಂದೆ ತಾಯಿಗೆ, ಶಿಕ್ಷಣ ಸಂಸ್ಥೆಗೆ ತುಂಬಾ ಥ್ಯಾಂಕ್ಸ್ ಅಂತ ಹೇಳಿದರು. ತನುಶ್ರೀ ತಂದೆ ಉದಯ್ ಮಾತನಾಡಿ, ತನುಶ್ರೀಗೆ ಯಾವೆಲ್ಲಾ ವಿಭಾಗದಲ್ಲಿ ಸಾಧನೆ ಮಾಡಬೇಕೋ ಮಾಡಲಿ. ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

ಯೋಗ, ದಾಖಲೆಗಳ ಜೊತೆ ತನುಶ್ರೀ ಭರತನಾಟ್ಯದ ಪ್ರವೀಣೆ, ಯಕ್ಷಗಾನ ಕಲಾವಿದೆ. ಮುಂದೆ ಒಂದು ನಿಮಿಷದಲ್ಲಿ ಅತೀ ಹೆಚ್ಚು ಯೋಗ ಭಂಗಿಗಳನ್ನು ಮಾಡಿ ದಾಖಲೆ ಮಾಡುವ ಕನಸು ಇಟ್ಟುಕೊಂಡಿದ್ದಾಳೆ ತನುಶ್ರೀ.

Share This Article
Leave a Comment

Leave a Reply

Your email address will not be published. Required fields are marked *