ಮೊಳಕಾಲ್ಮೂರಿನ ಚಿಕ್ಕೋಬನಹಳ್ಳಿ ದೆವ್ವ, ಭೂತದ ಭಯ- ಕಳಚ್ತಲೇ ಇಲ್ಲ ಸಾವಿನ ಸರಣಿ

Public TV
1 Min Read

ಚಿತ್ರದುರ್ಗ: ಹುಟ್ಟೂರಿಗೆ ಹೋಗಬೇಕು ಅಂದ್ರೆ ಯಾರಿಗ್ ತಾನೇ ಇಷ್ಟ ಇರಲ್ಲ ಹೇಳಿ. ಆದರೆ ಇಲ್ಲೊಂದು ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಜನರು ತಮ್ಮ ಊರಲ್ಲಿ ಜೀವನ ನಡೆಸೋದಕ್ಕೆ ಭಯ ಬೀಳ್ತಿದ್ದಾರೆ.

ಒಂದೆಡೆ ಖಾಲಿಖಾಲಿಯಾಗಿ ಕಾಣ್ತಿರುವ ಊರು, ಇನ್ನೊಂದೆಡೆ ಬೀಗ ಹಾಕಿರುವ ಮನೆಗಳು. ಭಯದಲ್ಲೇ ಬದುಕು ನಡೆಸುತ್ತಿರುವ ಗ್ರಾಮಸ್ಥರು. ಹುಟ್ಟೂರನ್ನು ಖಾಲಿ ಮಾಡಿ ಪಕ್ಕದೂರಿನಲ್ಲಿ ನೆಲೆಸಿರುವ ಜನರು. ಈ ದೃಶ್ಯಗಳು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದಲ್ಲಿ ಕಂಡುಬಂದಿವೆ.

ಈ ಹಳ್ಳಿಯಲ್ಲಿ ಬೋವಿ ಸಮುದಾಯಕ್ಕೆ ಸೇರಿದ ಸುಮಾರು ಮೂವತ್ತಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ವು. ಆದರೆ ಈ ಊರಲ್ಲಿ ನಿರಂತರವಾಗಿ ಸರಣಿ ಸಾವುಗಳಾದ ಪರಿಣಾಮ ಬೆಚ್ಚಿಬಿದ್ದಿರುವ ಸುಮಾರು ಇಪತ್ತು ಕುಟುಂಬಗಳ ಜನರು ತಮ್ಮ ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿದ್ದಾರೆ. ಊರಲ್ಲಿ ದೆವ್ವ, ಭೂತದ ಕಾಟವಿದೆ ಅಂತ ಪಕ್ಕದೂರಾದ ಹೊಸೂರಿನಲ್ಲಿ ಕೆಲವರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಇನ್ನೂ ಕೆಲವರು ಸರ್ಕಾರಿ ಗೋಮಾಳದಲ್ಲಿ ಗುಡಿಸಲು ಹಾಕಿಕೊಂಡು ನೆಲೆಸಿದ್ದಾರೆ. ಅಲ್ಲದೆ ಸಂಜೆ ಆಯ್ತಂದ್ರೆ ಮನೆಯಿಂದ ಹೊರಗಡೆ ಬರುವುದಕ್ಕೂ ಭಯವಾಗುತ್ತೆ ಅಂತ ಆತಂಕ ವ್ಯಕ್ತಪಡಿಸುತ್ತಾರೆ.

ಪೂರ್ವಜರ ಕಾಲದಿಂದಲೂ ಕಲ್ಲು ಹೊಡೆಯುವ ಕಾಯಕ ಮಾಡುವ ಬೋವಿ ಸಮುದಾಯದ ಜನರು ಮಾತ್ರ ವಾಸಿಸುವ ಈ ಕಾಲೋನಿಯಲ್ಲಿ ಯಾರಿಗೂ ಸ್ವಂತ ಮನೆಗಳಿಲ್ಲ. ಇವರ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯನ್ನು ಕೊಡಿಸಲು ಆಗ್ತಿಲ್ಲ. ಹೀಗಾಗಿ ಒಂದು ರೀತಿಯ ಅಲೆಮಾರಿ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನರಿಗೆ, ಶಿಕ್ಷಣ ಹಾಗು ಮೂಲಭೂತ ಸೌಲಭ್ಯ ಕಲ್ಪಿಸಿದ್ರೆ ಈ ಆತಂಕ ಶಮನಗೊಳಿಸಬಹುದು ಹಾಗು ಜಾಗೃತಿ ಮೂಡಿಸಿ ಇಲ್ಲಿನ ಮೌಡ್ಯ ನಿವಾರಿಸಬಹುದೆಂಬ ಆಗ್ರಹ ಇಲ್ಲಿನ ಪ್ರಜ್ಞಾವಂತರಿಂದ ಕೇಳಿಬಂದಿದೆ.

ಒಟ್ಟಾರೆ ಚಿಕ್ಕೋಬನಹಳ್ಳಿಯ ಬೋವಿ ಕಾಲೋನಿಯ ಜನರು ಸಾವಿನ ಸರಣಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಠಾಧೀಶರು ಜನಜಾಗೃತಿ ಮೂಡಿಸಿ, ಆತಂಕಗೊಂಡ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸೋ ಜೊತೆಗೆ ಆತ್ಮಸ್ಥೈರ್ಯ ತುಂಬಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *