ಮೊದಲು ಡ್ರಗ್ಸ್ ಮಾಫಿಯಾದ ಬುಡ ಕಿತ್ತು ಬಿಸಾಕಬೇಕು: ನಟ ಜೆಕೆ

Public TV
2 Min Read

– ಸಾಕ್ಷ್ಯ ಇದ್ದು ಮಾತನಾಡಬೇಕು

ಬೆಂಗಳೂರು: ಯಾರೋ ಡ್ರಗ್ಸ್ ತೆಗೊಂತಿದ್ದಾರೆ ಎಂದು ಅವರನ್ನು ಒಳಗೆ ಹಾಕಿ, ಅವರ ಜೀವನ ಹಾಳು ಮಾಡುವ ಬದಲು ಅದರ ಮೂಲವನ್ನು ಕಂಡುಹಿಡಿಯಬೇಕು. ಈ ಮೂಲಕ ಡ್ರಗ್ಸ್ ಮಾಫಿಯಾದ ಬುಡ ಸಮೇತ ಕಿತ್ತು ಬಿಸಾಕಬೇಕು ಎಂದು ನಟ ಜೆಕೆ ಹೇಳಿದ್ದಾರೆ.

ನಗರದಲ್ಲಿ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡವರ ಹೆಸರು ಬಹಿರಂಗಪಡಿಸಿದರೆ ಒಳ್ಳೆಯದು. ಈ ಮಾಫಿಯಾದಲ್ಲಿ ಯಾರೆಲ್ಲ ಇದ್ದಾರೆ ಹಾಗೂ ಅವರಿಗೆ ಎಲ್ಲಿಂದ ಡ್ರಗ್ಸ್ ಬರ್ತಾ ಇದೆ ಎಂಬುದನ್ನು ಕಂಡು ಹಿಡಿದರೆ ಬಹಳ ಒಳ್ಳೆಯದು. ಯಾಕೆಂದರೆ ಯವ ಪೀಳಿಗೆ ಈ ದೇಶವನ್ನು ಒಳ್ಳೆಯ ರೀತಿಯಲ್ಲಿ ಒಂದು ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ದೇಶದ ಬೆಳವಣಿಗೆಗೆ ಯುವ ಪೀಳಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಅವರನ್ನು ಡ್ರಗ್ಸ್ ತಪ್ಪು ದಾರಿಗೆ ಎಳೆಯುತ್ತಿದ್ದು, ಅದನ್ನು ನಿಲ್ಲಿಸಬೇಕಾಗಿದೆ ಎಂದರು.

ಯುವನಟ ಸಾವನ್ನಪ್ಪಿದ್ದಾರೆ ಎಂಬ ಇಂದ್ರಜಿತ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪೂರ್ಣ ಮಾಹಿತಿ ಇಟ್ಟುಕೊಂಡೇ ಯಾವತ್ತೂ ಮಾತನಾಡಬೇಕು. ಅವರು ಯಾವ ರೀತಿಯಲ್ಲಿ ಮಾತನಾಡಿದ್ದಾರೆ ಹಾಗೂ ಅವರಲ್ಲಿ ಈ ಬಗ್ಗೆ ಎಷ್ಟು ಸಾಕ್ಷ್ಯ ಇದೆ ಎಂದು ನನಗೆ ಗೊತ್ತಿಲ್ಲ. ಹೀಗಾಗಿ ನನ್ನ ಪ್ರಕಾರ ಇದು ತಪ್ಪು. ಯಾಕೆಂದರೆ ಈ ಬಗ್ಗೆ ತನಿಖೆ ಮಾಡಲು ಪೊಲೀಸರು, ಸಿಬಿಐ ಅವರು ಇದ್ದಾರೆ. ಅವರು ತನಿಖೆ ಮಾಡಿ ಅದಕ್ಕೊಂದು ಸಾರಾಂಶ ಕೊಟ್ಟ ಬಳಿಕ ಮಾತನಾಡಿದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದ್ರಜಿತ್ ಅವರು ಇಷ್ಟೊಂದು ಧೈರ್ಯದಿಂದ ಹೇಳುತ್ತಿದ್ದಾರೆ ಅಂದರೆ ಅವರಿಗೆ ತಿಳಿದಿದೆ ಅಂತಾನೇ ಹೇಳಬಹುದು. ಈ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಇದರಿಂದ ಸಮಾಜಕ್ಕೆ ಒಳ್ಳೆಯದಾಗುವುದಿದ್ದರೆ ಇದೊಂದು ಒಳ್ಳೆಯ ಹೆಜ್ಜೆ ಎಂದು ತಿಳಿಸಿದರು.

10 ವರ್ಷದಿಂದ ಚಿತ್ರರಂಗದಲ್ಲಿ ಇದ್ದೀನಿ ಅಂದರೆ ಅದರ ಮೇಲೆ ಇರುವ ಪ್ರೀತಿಯೇ ಕಾರಣ. ಸ್ಯಾಂಡಲ್‍ವುಡ್ ನನಗೆ ಬೆಳೆಯಲು ಅವಕಾಶ ಕೊಟ್ಟಿದೆ. ಎಲ್ಲಾ ಕೆರಿಯರ್ ನಲ್ಲಿ ಏರಿಳಿತಗಳು ಇವೆ. ತುಂಬಾ ಅಡಚಣೆಗಳು ಬರುತ್ತಾನೇ ಇರುತ್ತವೆ. ಅದನ್ನು ಎದುರಿಸಿಕೊಂಡು ಹೋಗುವುದೇ ಜೀವನ ಎಂದು ಹೇಳಿದರು.

ಇದೂವರೆಗೂ ನಾವು ಬರೀ ಟಿವಿ ಹಾಗೂ ಸಿನಿಮಾಗಳಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ನೋಡುತ್ತಿದ್ವಿ. ಆವಾಗ ಅನ್ನಿಸುತ್ತಿತ್ತು ಈ ರೀತಿ ಆಗುತ್ತಾ..? ಯಾಕೆ ಜನ ತಗೊತ್ತಿದ್ದಾರೆ?. ಯಾವ ಕಾರಣಕ್ಕೆ ಡ್ರಗ್ಸ್ ಸೇವನೆ ಮಾಡುತ್ತಾರೆ?. ಅದರಿಂದ ಏನು ಸಿಗುತ್ತೆ ಎಂದು ಯಾವಾಗಲೂ ಯೋಚನೆ ಮಾಡುತ್ತಿದ್ದೆವು. ನನ್ನ ಕಾಲೇಜು ದಿನಗಳಿಂದಲೂ ನಾನು ನೋಡ್ತಾ ಇದ್ದೆ. ಆದರೆ ಯಾವತ್ತೂ ಇದರ ಬಗ್ಗೆ ಆಸಕ್ತಿ ಬಂದಿಲ್ಲ. ಬರೀ ಫಿಟ್ ನೆಸ್ ಬಗ್ಗೆನೇ ಹೆಚ್ಚು ಆಸಕ್ತಿ ಹೊಂದಿದ್ದೆ. ಆದರೆ ಇದು ಚಿತ್ರರಂಗದಲ್ಲಿ ಆಗುತ್ತಿದೆ ಅಂದರೆ ನಿಜಕ್ಕೂ ಬೇಸರವಾಗುತ್ತಿದ್ದು, ಇದು ಆಗಬಾರದು. ಇದನ್ನು ನಿಲ್ಲಿಸಲೇ ಬೇಕು ಎಂದರು.

ಇದು ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ, ಇಡೀ ವಿಶ್ವದಲ್ಲೇ ನಡೆಯುತ್ತಿರೋ ಜಾಲವಾಗಿದೆ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಈ ರೀತಿ ಆಗ್ತಿದೆ ಅಂದಾಗ ತುಂಬಾನೇ ಬೇಜಾರಾಗುತ್ತದೆ. ಹೀಗಿರುವಾಗ ಈ ಮಾಫಿಯಾದಲ್ಲಿ ಯಾರೂ ಭಾಗಿಯಾಗಿಲ್ಲ ಅಂತ ಹೇಳಿದರೆ ನಮಗೆ ತುಂಬಾನೇ ಖುಷಿಯಾಗುತ್ತದೆ. ಯಾಕಂದರೆ ಸ್ಯಾಂಡಲ್ ವುಡ್ ಅಂದರೆ ನಮಗೆ ಒಂದು ಕುಟುಂಬ ಇದ್ದಂತೆ ಎಂದು ನುಡಿದರು.

 

Share This Article
Leave a Comment

Leave a Reply

Your email address will not be published. Required fields are marked *