ಮೈಸೂರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್- ಪೊಲೀಸರು ನಮ್ಮನ್ನು ಮುಟ್ಟೇ ಇಲ್ಲ ಎಂದ ಬೈಕ್ ಸಹ ಸವಾರ

Public TV
2 Min Read

– ಪೊಲೀಸರ ಮೇಲೆ ಹಲ್ಲೆ, 13 ಮಂದಿ ಬಂಧನ

ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮೈಸೂರಿನ ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಘಾತದಲ್ಲಿ ಗಾಯಗೊಂಡಿರುವ ಸಹ ಸವಾರನ ವೀಡಿಯೋ ಹೇಳಿಕಯನ್ನು ಪೊಲೀಸರು ಇಂದು ಬಿಡುಗಡೆ ಮಾಡಿದ್ದಾರೆ. ಇನ್ನೊಂದೆಡೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಕ್ಕೆ 13 ಜನರನ್ನು ಬಂಧಿಸಿದ್ದು, ಇನ್ನೂ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

ಮೈಸೂರಿನಲ್ಲಿ ನಡೆದ ಬೈಕ್ ಅಪಘಾತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಅಪಘಾದಲ್ಲಿ ಬೈಕ್ ಸವಾರ ದೇವರಾಜ್ ಸಾವನ್ನಪ್ಪಲು ಪೊಲೀಸರೇ ಕಾರಣ. ದಂಡ ಕಟ್ಟಿಸಿಕೊಳ್ಳಲು ತಕ್ಷಣವೇ ಪೊಲೀಸರು ನಿಲ್ಲಿಸಿದ್ದಕ್ಕೆ ಹಿಂದಿನಿಂದ ಬಂದ ಲಾರಿ ಬೈಕ್ ಸವಾರನ ಮೇಲೆ ಹರಿದಿದೆ. ಹೀಗಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶಗೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.

ವಿಜಯನಗರ ಪೊಲೀಸ್ ಕಾರ್ಯಚರಣೆಯಲ್ಲಿ 13 ಮಂದಿಯನ್ನು ಬಂಧಿಸಲಾಗಿದ್ದು, 15 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿನ ವಿಡಿಯೋ ದೃಶ್ಯಾವಳಿ ಆಧರಿಸಿ 13 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಜಯನಗರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ.

ಅಪಘಾತ ಪ್ರಕರಣದಲ್ಲಿ ಪೊಲೀಸರ ತಪ್ಪೇ ಇಲ್ಲ ಎಂದು ಪೊಲೀಸ್ ಇಲಾಖೆ ಹೇಳುತ್ತಿದ್ದು, ಪೊಲೀಸರ ಬಳಿ ವಾಹನ ಬರುವ ಮೊದಲೇ ಅಪಘಾತವಾಗಿತ್ತು. ಪೊಲೀಸರು ನಿಂತಿದ್ದ 200 ಮೀಟರ್ ದೂರದಲ್ಲಿ ಸವಾರ ಬೈಕ್ ನಿಲ್ಲಸಿದ್ದ. ಈ ವೇಳೆ ಹಿಂಬದಿಯಿಂದ ಬಂದ ಟ್ರಕ್ ಬೈಕ್ ಸವಾರರ ಮೇಲೆ ಹರಿದಿದೆ. ಹಿರೋ ಹೋಂಡಾ ಬೈಕ್‍ನಲ್ಲಿ ಇಬ್ಬರಿದ್ದರು. ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೊಬ್ಬರು ಮೃತಪಟ್ಟಿದ್ದಾರೆ. ತಪ್ಪು ಗ್ರಹಿಕೆಯಿಂದ ಸಾರ್ವಜನಿಕರು ಆಕ್ರೋಶಭರಿತರಾಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಬೈಕ್ ಸಹ ಸವಾರ ಸುರೇಶ್ ಅವರ ವೀಡಿಯೋ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪೊಲೀಸರು ನಮ್ಮನ್ನು ತಡೆಯಲಿಲ್ಲ. ಮೃತ ದೇವರಾಜ್ ಅವರೇ ಬೈಕ್ ನಿಧಾನ ಮಾಡಿದರು. ಆಗ ಹಿಂಬದಿಯಿಂದ ಬಂದ ಟಿಪ್ಪರ್ ನಮಗೆ ಡಿಕ್ಕಿಯಾಗಿತ್ತು. ಪೊಲೀಸರು ನಮ್ಮನ್ನು ಸ್ಪರ್ಶಿಸಲೇ ಇಲ್ಲ. ಬೈಕ್ ಹಿಡಿಯುತ್ತಿದ್ದುದನ್ನು ಕಂಡು ದೇವರಾಜ್ ನಿಧಾನ ಮಾಡಿದರು. ಆಗ ಹಿಂದಿನಿಂದ ಟಿಪ್ಪರ್ ಬಂದು ಡಿಕ್ಕಿಯಾಯಿತು. ನಾನು ಕೆಳಗೆ ಬಿದ್ದಿದ್ದು ಮಾತ್ರ ನೆನಪಿದೆ. ನಂತರ ನೋಡಿದರೆ ಅಪಘಾತವಾಗಿ ಜನ ಸೇರಿದ್ದರು. ಘಟನೆಗೆ ಪೊಲೀಸರು ಕಾರಣವಲ್ಲ ಎಂದು ಮೈಸೂರು ಪೊಲೀಸ್ ಇಲಾಖೆಯಿಂದ ಸಹ ಸವಾರ ಸುರೇಶ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ನಾಲ್ಕು ಪ್ರಕರಣ ದಾಖಲು
ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿದ್ದು, ಪೊಲೀಸರಿಂದಲೇ ಮೂರು ಪ್ರಕರಣ ದಾಖಲಾಗಿವೆ. ಬೈಕ್ ಸವಾರನ ಕುಟುಂಬಸ್ಥರಿಂದ ಒಂದು ಪ್ರಕರಣ ದಾಖಲಾಗಿದೆ. ತಮ್ಮ ಮೇಲಿನ ಹಲ್ಲೆ ಕುರಿತು ಇಬ್ಬರು ಪೊಲೀಸರಿಂದ 2 ದೂರು, ಪೊಲೀಸ್ ವಾಹನ ಜಖಂ ಕುರಿತು 1 ದೂರು, ಬೈಕ್ ಸವಾರನ ಕುಟುಂಬಸ್ಥರಿಂದ ಪೊಲೀಸರ ನಿರ್ಲಕ್ಷ್ಯದ ಆರೋಪದ ಮೇಲೆ 1 ದೂರು ದಾಖಲಾಗಿದೆ. ಪ್ರತ್ಯಕ್ಷದರ್ಶಿಗಳಿಂದಲೂ ಪೊಲೀಸರ ಮೇಲೆ ಆರೋಪ ಮಾಡಲಾಗಿದೆ. ಆದರೆ ಪೊಲೀಸರಿಂದ ತಪ್ಪೇ ಆಗಿಲ್ಲ ಎಂದು ಇಲಾಖೆ ಹೇಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *