ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ

Public TV
2 Min Read

– ಬೆಂಗಳೂರಿನಿಂದ ಮೈಸೂರಿಗೆ ಹೊರಟ ಬಸ್

ಮೈಸೂರು: ಮೈಸೂರಲ್ಲಿ ಈಗ ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಹೆಚ್ಚಾಗುತ್ತಿವೆ. ಮೈಸೂರು ಸೇರಿದಂತೆ ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ವೈರಸ್ ಪತ್ತೆ ಹಚ್ಚಲು ರಾಜ್ಯಾದ್ಯಂತ 6 ಪ್ರಯೋಗಾಲಯಗಳು ಸ್ಥಾಪನೆಯಾಗುತ್ತಿದ್ದು, ಈ ಪೈಕಿ ಶೀಘ್ರವೇ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ‘ಡೆಲ್ಟಾ ಪ್ಲಸ್’ ವೈರಾಣು ಪತ್ತೆಗೆ ಪ್ರತ್ಯೇಕ ಲ್ಯಾಬ್ ಆರಂಭವಾಗಲಿದೆ.

ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಈಗಾಗಲೇ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲೂ ಕಾಣಿಸಿಕೊಂಡಿದೆ. ಈ ರೂಪಾಂತರಿ ವೇಗವಾಗಿ ಹರಡುವುದರೊಂದಿಗೆ ಸೋಂಕಿಗೆ ತುತ್ತಾದವರ ಸಾವಿಗೂ ಕಾರಣವಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಮಾದರಿಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ಫಲಿತಾಂಶ ಬರುವುದು ತಡವಾಗುತ್ತಿದೆ. ಇದನ್ನೂ ಓದಿ: ಹೊಸ ಡೆಲ್ಟಾ ಪ್ಲಸ್ ವೈರಾಣು ಪತ್ತೆಗೆ ಜೀನೋಮ್ ಸೀಕ್ವೆನ್ಸ್: ಸುಧಾಕರ್

ಈ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದ ಮೈಸೂರು, ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜಿಲ್ಲಾ ಪ್ಲಸ್ ಜೀನೋಮ್ ಸೀಕೆನ್ಸಿಂಗ್ ಲ್ಯಾಬ್‍ಗಳನ್ನು ಸ್ಥಾಪಿಸುವುದಕ್ಕೂ ಚಿಂತಿಸಿದೆ. ಮೈಸೂರಿನ ಕೆ.ಆರ್.ಆಸತ್ರೆಯ ಮೈಕ್ರೋಬಯಾಲಜಿ ವಿಭಾಗದಲ್ಲಿ ಅತ್ಯಾಧುನಿಕ ವೈರಲ್ ರೀಸರ್ಚ್ ಮತ್ತು ಡಯಾಗೋಸ್ಟಿಕ್‍ಲ್ಯಾಬೊರೇಟರಿ (ವಿಆರ್ ಡಿಎಲ್) ಪಕ್ಕದಲ್ಲಿ ಡೆಲ್ಟಾ ವೈರಸ್ ಪತ್ತೆಗಾಗಿ ಹೊಸ ಪ್ರಯೋಗಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಮೈಸೂರು, ಕೊಡಗು, ಚಾಮರಾಜ ನಗರ, ಮಂಡ್ಯ ಸೇರಿದಂತೆ ನೆರೆಯ ಜಿಲ್ಲೆಗಳ ಸೋಂಕಿತರ ಸ್ವಾಬ್ ಪರೀಕ್ಷೆ ನಡೆಸಲೂ ಸಹಕಾರಿಯಾಗಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಏರಿಕೆ

ಬೆಂಗಳೂರಿನಿಂದ ಮೈಸೂರಿಗೆ ಬಸ್: ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗದ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ಮೈಸೂರಿನಿಂದ ಬೆಂಗಳೂರು, ಬೆಂಗಳೂರು ನಿಂದ ಮೈಸೂರಿಗೆ ಬಸ್ ಸಂಚಾರ ಬಂದ್ ಆಗಿತ್ತು. ಸದ್ಯ ಸೋಂಕು ನಿಯಂತ್ರಣಕ್ಕೆ ಬಂದಿದ್ದರಿಂದ ಬಸ್ ಸಂಚಾರ ಆರಂಭವಾಗಿದೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ಮೈಸೂರು, ಚಾಮರಾಜನಗರ, ವಿರಾಜಪೇಟೆ , ಭಾಗಕ್ಕೆ ಹಂತ ಹಂತವಾಗಿ ಬಸ್ ಗಳು ಏರಿಕೆಯಾಗ್ತಿದ್ರೂ, ಪ್ರಯಾಣಿಕರು ಮಾತ್ರ ಬಸ್ ನಿಲ್ದಾಣದತ್ತ ಮುಖಮಾಡಿಲ್ಲ. ಅನಿವಾರ್ಯವಾಗಿ ಪ್ರಯಾಣಿಕರಿಗಾಗಿ ಚಾಲಕ, ನಿರ್ವಾಹಕರು ಮೊದಲ ದಿನವೇ ಕಾಯುವಂತಾಗಿದೆ

ಮೈಸೂರಿನಲ್ಲಿ ಪ್ರಯಾಣಿಕರೇ ಇಲ್ಲ: ಮೈಸೂರಿನಿಂದ ಕೆಎಸ್‍ಆರ್ ಟಿಸಿ ಬಸ್ ಸಂಚಾರ ಇಂದಿನಿಂದ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಬಸ್ ಸಂಚಾರ ಆರಂಭವಾಗಿದೆ. ಅದರೆ, ಪ್ರಯಾಣಿಕರೆ ಬಹಳ ಕಡಿಮೆ ಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಾರೆ. ಮೊದಲು ಬೆಂಗಳೂರು ಮಾರ್ಗವಾಗಿ ಪ್ರತಿ ಐದು ನಿಮಿಷಕ್ಕೆ ಒಂದು ಬಸ್ ಸಂಚರಿಸುತ್ತಿತ್ತು. ಆದರೆ ಇವತ್ತು ಅರ್ಧ ಗಂಟೆಗೂ ಒಂದು ಬಸ್ ಪ್ರಯಾಣಿಕರಿಂದ ಭರ್ತಿಯಾಗುತ್ತಿಲ್ಲ. ಇಷ್ಟು ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಿದೆ.

Share This Article
Leave a Comment

Leave a Reply

Your email address will not be published. Required fields are marked *