ಮೈದಾನದಲ್ಲೇ ಧೋನಿ ಕೋಪಗೊಂಡು ರೈನಾಗೆ ಎಚ್ಚರಿಕೆ ನೀಡಿದ್ದರು: ಆರ್‌ಪಿ ಸಿಂಗ್‌

Public TV
2 Min Read

ಮುಂಬೈ: ಧೋನಿಯವರು ಕೋಪಗೊಂಡು ಮೈದಾನದಲ್ಲೇ ರೈನಾ ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಆರ್‌ಪಿ ಸಿಂಗ್‌ ಹೇಳಿದ್ದಾರೆ.

ಭಾರತದ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಯವರು ಅಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಇವರ ಜೊತೆಗೆ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದ್ದರು. ಈಗ ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ಬಗ್ಗೆ ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ಆರ್‌ಪಿ ಸಿಂಗ್‌, ಧೋನಿ ರೈನಾ ಅವರ ಮೇಲೆ ಕೋಪ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

ಧೋನಿ ಮೈದಾನದಲ್ಲಿ ಕೂಲ್ ಆಗಿ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಂಎಸ್‍ಡಿ ಮೈದಾನದಲ್ಲಿ ಕೋಪ ಮಾಡಿಕೊಳ್ಳುವುದು, ಸಹ ಆಟಗಾರರನ್ನು ಕೋಪದಿಂದ ಮಾತನಾಡಿಸುವುದನ್ನು ಎಂದು ಮಾಡಿಲ್ಲ. ಆದರೆ ಅವರು ರೈನಾ ಅವರ ಮೇಲೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೋಪ ಮಾಡಿಕೊಂಡಿದ್ದರು. ಜೊತೆಗೆ ರೈನಾಗೆ ಎಚ್ಚರಿಕೆ ಕೂಡ ನೀಡಿದ್ದರು ಎಂದು ಆರ್‌ಪಿ ಸಿಂಗ್‌ ಈ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಂಗ್, ನಾವು ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಆಡುತ್ತಿದ್ದೆವು. ಆಗ ಕವರ್ ಪಾಯಿಂಟ್‍ನಲ್ಲಿ ಧೋನಿ ರೈನಾ ಅವರನ್ನು ನಿಲ್ಲಿಸಿದ್ದರು. ಆಗ ರೈನಾ ಅವರನ್ನು ಧೋನಿ ಸ್ವಲ್ಪ ಹಿಂದೆ ಬಂದು ನಿಲ್ಲಲು ಸೂಚಿಸಿದ್ದರು. ಆದರೆ ರೈನಾ ಬಂದಿರಲಿಲ್ಲ. ನೆಕ್ಟ್ ಬಾಲ್ ಅನ್ನು ರೈನಾ ಕೈಚೆಲ್ಲಿದರು. ಇದರಿಂದ ಕೋಪಗೊಂಡ ಧೋನಿ, ರೈನಾ ಅವರನ್ನು ಕೂಗಿ ನಾನು ಹಿಂದೆ ಬಾ ಎಂದು ಹೇಳಿರಲಿಲ್ಲವೆ ಎಂದರು. ಜೊತೆಗೆ ಹಿಂದೆ ಬಂದು ನಿಲ್ಲು ಕ್ಯಾಚ್ ಬರುತ್ತೆ ತುಂಬ ಹತ್ತಿರ ಹೋಗಿ ನಿಲ್ಲಬೇಡ ಎಂದು ಕೋಪದಿಂದ ಎಚ್ಚರಿಕೆ ನೀಡಿದ್ದರು ಎಂದು ಹೇಳಿದ್ದಾರೆ.

ಸುಮಾರು 15 ವರ್ಷದಿಂದ ಧೋನಿ ರೈನಾ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದರು. ಜೊತೆಗೆ ಅವರು ಐಪಿಎಲ್‍ನಲ್ಲೂ ಒಂದೇ ತಂಡಕ್ಕೆ ಆಡುವುದರಿಂದ ಅವರಿಬ್ಬರ ನಡುವೆ ಒಳ್ಳೆಯ ಗೆಳತನವಿದೆ. ಇದಕ್ಕೆ ಸಾಕ್ಷಿ ಎಂಬಂತೆ ಧೋನಿ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷದಲ್ಲಿ ರೈನಾ ವಿದಾಯ ಹೇಳಿದರು. ಈ ಮೂಲಕ ಒಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಹೊರಬಂದರು. ಆದರೆ ಈ ಇಬ್ಬರು ಕೂಡ ಐಪಿಎಲ್‍ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ಧೋನಿ ಮತ್ತು ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಟ್ಟಿಗೆ ಆಡಲಿದ್ದಾರೆ. ಸಿಎಸ್‍ಕೆ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ. ಕಳೆದ ವಾರ ಸಿಎಸ್‍ಕೆ ತಂಡ ಚೆನ್ನೈಗೆ ಬಂದು, ಅಭ್ಯಾಸವನ್ನು ನಡೆಸುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರು ಶುಕ್ರವಾರ (ಆಗಸ್ಟ್ 21) ಯುಎಇಗೆ ಹಾರಲಿದ್ದಾರೆ. ಐಪಿಎಲ್-2020 ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *