ಮೇ 26ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ

Public TV
2 Min Read

– ಪೂಜೆಗಳನ್ನು ನೇರ ಪ್ರಸಾರ ಮಾಡಲು ಚಿಂತನೆ

ಬೆಂಗಳೂರು: ಇಷ್ಟು ದಿನ ಕೊರೊನಾ ವೈರಸ್ ಭೀತಿಗೆ ಬಂದ್ ಆಗಿದ್ದ ದೇವಲಯಗಳಲ್ಲಿ ಈಗ ಭಕ್ತರಿಗೆ ಆನ್‍ಲೈನ್ ಮೂಲಕ ಹಣ ಪಾವತಿಸಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತಿದೆ. ಮೇ 26, 27ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ ಆಗಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಆನ್‍ಲೈನ್‍ನಲ್ಲಿ ಭಕ್ತರು ದೇವಸ್ಥಾನಗಳಿಗೆ ಹಣ ಪಾವತಿ ಮಾಡಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತದೆ. 15ರಿಂದ 20 ಸೇವೆಗಳಿಗೆ ಅವಕಾಶ ಕೊಡಲಾಗುತ್ತದೆ. ಆನ್‍ಲೈನ್‍ನಲ್ಲಿ ಭಕ್ತರು ಹಣ ಪಾವತಿ ಮಾಡಬೇಕು, ಅವರ ಹೆಸರಿನಲ್ಲಿ ಪೂಜೆ ಮಾಡಿ ಪ್ರಸಾದ ಭಕ್ತರ ಮನೆಗೇ ಕಳುಹಿಸ್ತೀವಿ. ಯಾರನ್ನು ದೇವಾಲಯದ ಒಳಗೆ ಬಿಡೋದಿಲ್ಲ. ಹಣ ಪಾವತಿಸಿದ ಭಕ್ತರು ಅಥವಾ ಅವರು ಹೇಳುವ ಮಂದಿಯ ಹೆಸರಿನಲ್ಲಿ ಪೂಜೆ ಮಾಡಿ ಪ್ರಸಾದ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಥಮ ಬಾರಿಗೆ 50 ದೇವಾಲಯದಲ್ಲಿ ಆನ್‍ಲೈನ್ ಸೇವೆಗೆ ಅವಕಾಶ ನೀಡಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿ, ಮೈಸೂರು ಚಾಮುಂಡೇಶ್ವರಿ, ಬನಶಂಕರಿ ದೇವಾಲಯ, ನಂಜನಗೂಡು ನಂಜುಂಡೇಶ್ವರ ದೇವಲಯ ಸೇರಿ ಒಟ್ಟು 50 ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭವಾಗುತ್ತದೆ. ಸಿಎಂ ಒಪ್ಪಿಗೆ ಕೊಟ್ಟ ಕೂಡಲೇ ಆನ್‍ಲೈನ್ ಸೇವೆ ಪ್ರಾರಂಭ ಮಾಡ್ತೀವಿ ಎಂದು ಸಚಿವರು ತಿಳಿಸಿದರು.

ಇಲಾಖೆ ವತಿಯಿಂದ ಸಾಮೂಹಿಕ ಮದುವೆ:
ಸಾಮೂಹಿಕ ವಿವಾಹ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಕಾರ್ಯಕ್ರಮಗಳು ನಡೆಯುತ್ತೆ. ಮೇ 31ರ ಬಳಿಕ ಲಾಕ್‍ಡೌನ್ ಮುಗಿದ ನಂತರ ಈ ಬಗ್ಗೆ ತೀರ್ಮಾನ ಮಾಡ್ತೀವಿ. ಕಡಿಮೆ ಜನಸಂಖ್ಯೆ, ಕಡಿಮೆ ಜೋಡಿಗಳನ್ನ ಇಟ್ಟುಕೊಂಡು ಮದುವೆ ಮಾಡುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ವರದಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಸಾಮೂಹಿಕ ಮದುವೆ ಇಲಾಖೆ ಮಾಡೇ ಮಾಡುತ್ತೆ. ಲಾಕ್‍ಡೌನ್ ಮುಗಿದ ನಂತರ ಈ ಬಗ್ಗೆ ಅಂತಿಮ ನಿರ್ಧಾರ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಆರ್ಥಿಕ ನೆರವು:
ಅರ್ಚಕರಿಗೆ ಆರ್ಥಿಕ ಸಮಸ್ಯೆಯಿದೆ. ಮೂರು ತಿಂಗಳು ಮುಂಗಡವಾಗಿ ತಸ್ತಿಕ್ ಹಣ ಬಿಡುಗಡೆಗೆ ಸಿಎಂಗೆ ಮನವಿ ಮಾಡಿದ್ದೇವೆ. ಸಿಎಂ ಸೂಚನೆ ಮೇರೆಗೆ 33.65 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಆರ್ಥಿಕ ಇಲಾಖೆ ಹಣವನ್ನ ಬಿಡುಗಡೆ ಮಾಡಿದೆ. 26,700 ದೇಗುಲಗಳ ಅರ್ಚಕರಿಗೆ 3 ತಿಂಗಳ ಮುಂಗಡ ತಸ್ತಿಕ್ ಹಣ ಬಿಡುಗಡೆ ಮಾಡಲಾಗಿದೆ. ಇತ್ತ ವರ್ಶಾಸನದ ದೇವಾಲಯಗಳಿಗೂ ಹಣ ಬಿಡುಗಡೆ ಮಾಡಲಾಗಿದೆ. 5.32 ಕೋಟಿ ರೂ. ಹಣ ಬಿಡುಗಡೆಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಒಟ್ಟು ಸುಮಾರು 39 ಕೋಟಿ ರೂ. ಹಣವನ್ನು ಮುಜರಾಯಿ ಇಲಾಖೆಗೆ ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಹಿತಿ ಕೊಟ್ಟರು.

ದೇವಾಲಯದ ಪೂಜೆಗಳನ್ನು ನೇರ ಪ್ರಸಾರ ಮಾಡಲು ನಿರ್ಧಾರ:
ಪ್ರಮುಖ ದೇವಾಲಯಗಳ ಪೂಜೆಗಳನ್ನು ನೇರ ಪ್ರಸಾರ ಮಾಡುವ ನಿಟ್ಟಿನಲ್ಲಿ ಇಲಾಖೆ ಚಿಂತನೆ ನಡೆಸಿದೆ. ಆಯ್ದ ದೇವಾಲಯಗಳ ಪೂಜೆ-ಪುನಸ್ಕಾರಗಳನ್ನ ನೇರ ಪ್ರಸಾರ ಮಾಡಲಾಗುತ್ತೆ. ಈ ನಿಟ್ಟಿನಲ್ಲಿ ಸಿದ್ಧತೆ ಪ್ರಾರಂಭವಾಗಿದೆ. ಯುಟ್ಯೂಬ್, ವೆಬ್ ಪೋರ್ಟಲ್, ಫೇಸ್‍ಬುಕ್‍ನಲ್ಲಿ ಪೂಜೆ ನೇರ ಪ್ರಸಾರ ಮಾಡುವ ಕಲ್ಪನೆ ಇದೆ. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡ್ತೀವಿ. ಶೀಘ್ರವೇ ದೇವಾಲಯಗಳ ಪೂಜೆ ನೇರ ಪ್ರಸಾರವಾಗುತ್ತೆ ಎಂದು ಶ್ರೀನಿವಾಸ್ ಪೂಜಾರಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *