ಮೇ 26 ವರ್ಷದ ಅತೀ ದೊಡ್ಡ ಚಂದ್ರ ದರ್ಶನ – 30 ಸಾವಿರ ಕಿಲೋಮೀಟರ್ ಹತ್ತಿರ ಬರ್ತಾನೆ ಚಂದ್ರ

Public TV
2 Min Read

ಉಡುಪಿ: ಮೇ 26ರ ವೈಶಾಖ ಹುಣ್ಣಿಮೆ ಬಹಳ ವಿಶೇಷವಾದ ಹುಣ್ಣಿಮೆ. ಅಂದು ಸೂಪರ್ ಮೂನ್ ಮತ್ತು ಚಂದ್ರಗ್ರಹಣ ನಡೆಯಲಿದೆ. 2021ರಲ್ಲಿ 3 ಸೂಪರ್ ಮೂನ್‍ಗಳ ಗೋಚರವಾಗುತ್ತದೆ. ಈ ವರ್ಷ ಭೂಮಿಗೆ ಅತಿ ಹತ್ತಿರದಿಂದ ಗೋಚರವಾಗುವ ಗ್ರಹಣ ಮೇ 26ಕ್ಕೆ ಸಂಭವಿಸಲಿದೆ.

ಭೂಮಿಯ ಸುತ್ತ ದೀರ್ಘ ವೃತ್ತಾಕಾರದಲ್ಲಿ ಚಲಿಸುವ ಸಂದರ್ಭ ಭೂಮಿಗೆ ಅತಿ ಸಮೀಪ ಚಂದ್ರ ಬರುತ್ತಾನೆ. ಭೂಮಿ ಮತ್ತು ಚಂದ್ರನ ನಡುವೆ 3,84,000 ಸಾವಿರ ಕಿಲೋ ಮೀಟರ್ ಅಂತರವಿದೆ. ಭೂಮಿಗೆ ಚಂದ್ರ ಬಹಳ ಹತ್ತಿರ ಬರಲಿದ್ದಾನೆ. 3 ಲಕ್ಷ 57 ಸಾವಿರ ಕಿಲೋಮೀಟರ್ ಅಂತರದಲ್ಲಿ ಪರ್ಯಟನೆ ಮಾಡಲಿದ್ದಾನೆ. ಸುಮಾರು ಏಳು ಶೇಕಡದಷ್ಟು ಚಂದ್ರ ದೊಡ್ಡದಾಗಿ ಮೇಲೆ ನಿಂತು ನಮಗೆ ಕಾಣಲಿದ್ದಾನೆ.

ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯ ನಡುವೆ ಈ ಗ್ರಹಣ ನಡೆಯುತ್ತದೆ. ನಾವು ಭಾರತೀಯರು ಗ್ರಹಣವನ್ನು ನೋಡಲು ಸಾಧ್ಯವಿಲ್ಲ. ಭಾರತದ ಯಾವ ಭೂಪ್ರದೇಶದಲ್ಲಿಯೂ ಚಂದ್ರಗ್ರಹಣ ಗೋಚರಿಸುವುದಿಲ್ಲ. ಆಸ್ಟ್ರೇಲಿಯಾ, ಚೀನಾ, ಜಪಾನ್, ಇಂಡೋನೇಷಿಯಾದ ಜನ ಚಂದ್ರ ಗ್ರಹಣ ನೋಡಬಹುದು ಎಂದು ಉಡುಪಿಯ ಪಿಪಿಸಿ ಕಾಲೇಜು ಖಗೋಳಶಾಸ್ತ್ರ ವಿಭಾಗ ಪ್ರಾಧ್ಯಾಪಕ ಅತುಲ್ ಭಟ್ ಮಾಹಿತಿ ನೀಡಿದ್ದಾರೆ.

ಭೂಮಿ, ಸೂರ್ಯ ಮತ್ತು ಚಂದ್ರನ ನಡುವೆ ಸಮತಲ ಇರುವುದರಿಂದ ಇಂತಹ ಗ್ರಹಣಗಳು ಸಂಭವಿಸುತ್ತವೆ. ಈ ಬಾರಿ ಸಂಪೂರ್ಣವಾಗಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಒಂದು ಚೂರೂ ಸೂರ್ಯನ ನೆರಳು ಚಂದ್ರನಿಗೆ ಬೀಳದೆ ಇರುವ ಕಾರಣ ಚಂದ್ರ ಸಂಪೂರ್ಣವಾಗಿ ಕೆಂಪಗೆ ಕಾಣಿಸುತ್ತಾನೆ. ಇದನ್ನು ನಾವು ರಕ್ತಚಂದ್ರ ಎಂದು ಕರೆಯುತ್ತೇವೆ.

ಗ್ರಹಣ ಬಗ್ಗೆ ಭಯ ಬೇಡ: ಭೂಮಿಯ ತುದಿಗಳಿಂದ ಮಾತ್ರ ಚಂದ್ರನಿಗೆ ಬೆಳಕು ಬೀಳುವ ಕಾರಣ ಚಂದ್ರ ಕೆಂಪಾಗಿ ಗೋಚರಿಸುತ್ತಾನೆ. ಪ್ರಪಂಚದ ಓಶನಿಯಾ ಪ್ರದೇಶಗಳಲ್ಲಿ ಮಾತ್ರ ಚಂದ್ರಗ್ರಹಣ ಗೋಚರಿಸುತ್ತದೆ. ಈಶಾನ್ಯ ರಾಜ್ಯಗಳ ಕೆಲವೆಡೆಯಲ್ಲಿ ಅರೆ ನೆರಳಿನ ಚಂದ್ರಗ್ರಹಣ ಗೋಚರಿಸಬಹುದು. ಮಧ್ಯಾಹ್ನ 2.17 ರಿಂದ 7.19ರ ನಡುವೆ ಗ್ರಹಣ ನಡೆಯಲಿದೆ.

ಗ್ರಹಣ ಕಾಣುವ ದೇಶಗಳಲ್ಲೂ ಕೂಡ 11 ನಿಮಿಷಗಳ ಕಾಲ ಮಾತ್ರ ಪೂರ್ಣಗ್ರಹಣ ಕಣ್ತುಂಬಿಕೊಳ್ಳಬಹುದು. ಬಾಹ್ಯಾಕಾಶದಲ್ಲಿ ನಡೆಯುವ ಈ ಬದಲಾವಣೆಯಿಂದ ಯಾರಿಗೂ ಅಪಾಯ ಇಲ್ಲ. ಸಮುದ್ರದ ಅಲೆ ಕೊಂಚ ಹೆಚ್ಚಾಗುವ ಸಾಧ್ಯತೆ ಇದೆ. ಯಾರಿಗೂ ಭಯಬೇಡ ಆತಂಕಬೇಡ. ಎಲ್ಲರೂ ಖುಷಿಯಿಂದ ಈ ಸೂಪರ್ ಮೂನನ್ನು ವೀಕ್ಷಣೆ ಮಾಡಿ ಎಂದು ಪೂರ್ಣಪ್ರಜ್ಞ ಖಗೋಳ ವೀಕ್ಷಕರ ಸಂಘ ನಿಮ್ಮಲ್ಲಿ ಕೇಳಿಕೊಳ್ಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *