ವಿಮಾನ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

Public TV
3 Min Read

ನವದೆಹಲಿ: ಕಡೆಗೂ ದೇಶಿಯ ವಿಮಾನಗಳ ಹಾರಾಟಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಇದರ ಬೆನ್ನಲ್ಲೇ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಮೇ 25 ರಿಂದ ಸೀಮಿತವಾಗಿ ದೇಶಿಯ ವಿಮಾನ ಹಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ವಿಮಾನಯಾನ ಸಚಿವಾಲಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ನೂತನ ಮಾರ್ಗಸೂಚಿಯಲ್ಲಿ ಪ್ರಯಾಣಿಕರು ಮತ್ತು ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ವಿಮಾನ ಹಾರಾಟದ ನಿಗದಿತ ಸಮಯಕ್ಕೆ ಇಪ್ಪತ್ತು ನಿಮಿಷಗಳ ಮುನ್ನ ನಿರ್ಗಮನವನ್ನು ಮುಚ್ಚಲಾಗುವುದು ಹೀಗಾಗಿ ಪ್ರಯಾಣಿಕರು ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಬರಬೇಕು, ಫಿಸಿಕಲ್ ಚೆಕ್ ಇನ್ ವ್ಯವಸ್ಥೆ ನಿರ್ಬಂಧಿಸಿದ್ದು ಕೇವಲ ವೆಬ್ ಚೆಕ್ ಇನ್ ವ್ಯವಸ್ಥೆ ಮೂಲಕ ಗ್ರಾಹಕರು ಮುಂಚೆಯೇ ಚೆಕ್ ಇನ್ ಮಾಡಿಕೊಳ್ಳಬೇಕು, ಕೇವಲ ಒಂದು ಲಗೇಜ್ ಬ್ಯಾಗ್ ನೊಂದಿಗೆ ಪ್ರಯಾಣ ಮಾಡಬಹದಾಗಿದ್ದು, ಪ್ರಯಾಣದ ವೇಳೆ ಊಟದ ವ್ಯವಸ್ಥೆ ನಿರ್ಬಂಧಿಸಲಾಗಿದೆ ಎಂದು ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ.

ಅಲ್ಲದೆ 14 ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ವಿಮಾನ ಪ್ರಯಾಣ ಮಾಡುವ ಎಲ್ಲರಿಗೂ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ. ವಿಮಾನ ನಿಲ್ದಾಣಕ್ಕೆ ಖಾಸಗಿ ವಾಹನಗಳಲ್ಲಿ ಆಗಮಿಸಿದಲ್ಲಿ ಡಿಜಿಟಲ್ ಪೇಮೆಂಟ್ ಗೆ ಆದ್ಯತೆ ನೀಡಿ, ಪ್ರಯಾಣಕ್ಕೆ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು, ಮಾಸ್ಕ್ ಗ್ಲೌಸ್  ಬಳಕೆ ಕಡ್ಡಾಯ, ಏರ್ ಪೋರ್ಟ್ ಗೆ ಆಗಮಿಸುವ ಮೊದಲು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಬೇಕು ಎಂದು ಷರತ್ತು ವಿಧಿಸಿದೆ. ಪ್ರಯಾಣ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಜನ ಸಂದಣಿ ಪ್ರದೇಶದಲ್ಲಿ ಅನಗತ್ಯ ವಸ್ತುಗಳನ್ನು ಸ್ಪರ್ಶಿದಂತೆ ಎಚ್ಚರಿಸಬೇಕು ಎಂದು ಸೂಚಿಸಿದೆ.

ವಿಮಾನಯಾನ ಸಂಸ್ಥೆಗಳಿಗೂ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದ್ದು, ವಿಮಾನ ನಿಲ್ದಾಣ ಪ್ರವೇಶಕ್ಕೂ ಮುನ್ನ ಸಿಐಎಸ್‍ಎಫ್ ನಿಂದ ಆರೋಗ್ಯ ಸೇತು ಪರಿಶೀಲನೆ ನಡೆಸಬೇಕು ಆರೋಗ್ಯ ಸೇತುವಿನಲ್ಲಿ ಗ್ರೀನ್ ಸ್ಟೇಟಸ್ ಬಾರದಿದ್ರೆ ಪ್ರಯಾಣಕ್ಕೆ ಅವಕಾಶ ನೀಡಬಾರದು. ಸೀಟು ಹಂಚಿಕೆಯಲ್ಲಿ ಸಂಸ್ಥೆಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ನೋಡಿಕೊಳ್ಳಬೇಕು, ಲಗೇಜ್ ಚೆಕ್ ಇನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಮೇಲುಸ್ತುವಾರಿಗೆ ಸಿಬ್ಬಂದಿ ನೇಮಿಸಿ ಎಂದು ತಿಳಿಸಿದೆ.

ವಿಮಾನಯಾನ ಸಿಬ್ಬಂದಿ ಪಿಪಿಇ ಕಿಟ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸಾಗಿಸುವ ಬಸ್ ಸ್ಯಾನಿಟೈಸ್ ಆಗಿರಬೇಕು, ಲಗೆಜ್ ನೀಡುವಾಗ, ಪಡೆಯುವಾಗ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಪ್ರಯಾಣಿಕರು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಲು ಹಲವು ಕಡೆ ವ್ಯವಸ್ಥೆ ಮಾಡಿಕೊಡಬೇಕು. ಶೌಚಾಲಯ ಸೇರಿದಂತೆ ಹೆಚ್ಚು ಜನ ಸೇರುವ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಬೇಕು, ಎಲ್ಲ ಭಾಗದಲ್ಲಿ ಸ್ವಚ್ಛತೆ ಕಾಪಾಡಬೇಕು, ಸ್ಯಾನಿಟೈಸರ್ ನೀಡಬೇಕು. ವಿಮಾನ ನಿಲ್ದಾಣಗಳಲ್ಲಿ ದಿನ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಇಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ವಿಮಾನ ನಿಲ್ದಾಣದ ಸಿಬ್ಬಂದಿಯಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಎಚ್ಚರಿಕೆ ವಹಿಸಬೇಕು, ವಿಮಾನ ನಿಲ್ದಾಣದೊಳಗಿನ ಅಂಗಡಿಗಳನ್ನು ತೆರೆಯಬಹುದು, ಸಾಮಾಜಿಕ ಅಂತರ ಮತ್ತು ಡಿಜಿಟಲ್ ಪೇಮೆಂಟ್ ಗಳಿಗೆ ಆದ್ಯತೆ ನೀಡಬೇಕು. ವಿಮಾನಯಾನ ಸಚಿವಾಲಯ ನೀಡಿದ ನಿಮಯಗಳ ಹೊರತಾಗಿ ಮತ್ತಷ್ಟು ಮುನ್ನೆಚ್ಚರಿಕೆ ನಿಯಮಗಳನ್ನು ವಿಮಾನಯಾನ ಸಂಸ್ಥೆಗಳು ಪಾಲಿಸಬಹುದು ಮುಂದಿನ ಹಂತದಲ್ಲಿ ಮತ್ತಷ್ಟು ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *