ಮೇ 15ಕ್ಕೆ 3 ಮಂದಿಗೆ ಕೊರೊನಾ- ಜೂನ್ 15 ಆಗೋ ಮೊದಲೇ 1005 ಪ್ರಕರಣ

Public TV
1 Min Read

– ಒಂದೇ ತಿಂಗಳಲ್ಲಿ ಸಾವಿರ ಮಂದಿಗೆ ಸೋಂಕು

ಉಡುಪಿ: ಡೆಡ್ಲಿ ಕೊರೊನಾ ಉಡುಪಿ ಜಿಲ್ಲೆಯಲ್ಲಿ ಸಾವಿರ ಗಡಿ ದಾಟಿದೆ. ಶನಿವಾರ ಜಿಲ್ಲೆಯಲ್ಲಿ 14 ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 1005ಕ್ಕೆ ಏರಿಕೆ ಆಗಿದೆ.

ಒಂದು ತಿಂಗಳೊಳಗೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಈ ಮೂಲಕ ಸಾವಿರ ಕೊರೊನಾ ಕೇಸ್ ದಾಖಲಾದ ಮೊದಲ ಜಿಲ್ಲೆ ಉಡುಪಿಯಾಗಿದೆ. ಶನಿವಾರ 14 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳು 1005 ಆಗಿದೆ. ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಆಗಮಿಸಿದವರಲ್ಲಿಯೇ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಲ್ಲಿ 8 ಪುರುಷರು, 5 ಮಹಿಳೆಯರು ಹಾಗೂ 6 ವರ್ಷದ ಬಾಲಕಿ ಸೇರಿದ್ದಾರೆ.

ಮೇ 15ರ ವರೆಗೆ ಉಡುಪಿ ಜಿಲ್ಲೆಯಲ್ಲಿ ಕೇವಲ 3 ಮಂದಿಯಲ್ಲಿ ಕೊರೊನಾ ಕಂಡುಬಂದಿತ್ತು. ಹೀಗಾಗಿ ಜಿಲ್ಲೆ ಗ್ರೀನ್‍ಜೋನ್‍ನಲ್ಲಿ ಇತ್ತು. ಆದರೆ ಮೇ 15ರಂದು ಮತ್ತೆ ಸೋಂಕು ಕಾಣಿಸಿಕೊಂಡ ನಂತರ ಏಕಾಏಕಿ ಸಂಖ್ಯೆ ಏರಿಕೆಯಾಗುತ್ತಿದೆ. ಅಲ್ಲದೇ ಉಡುಪಿಯಲ್ಲಿ 29 ದಿನಗಳಲ್ಲಿ 1002 ಮಂದಿಯಲ್ಲಿ ಕೊರೊನಾ ವೈರಸ್ ಕಂಡುಬಂದಿತ್ತು. ಇದೀಗ ಸೋಂಕಿತರ ಸಂಖ್ಯೆ 1005 ಆಗಿದೆ.

ಉಡುಪಿಯಲ್ಲಿ 1005 ಪ್ರಕರಣಗಳ ಪೈಕಿ 584 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 420 ಪ್ರಕರಣ ಸಕ್ರಿಯವಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಜಿಲ್ಲೆಯ 1005 ಸೋಂಕು ಪ್ರಕರಣದಲ್ಲಿ 964 ಮಂದಿ ಮಹಾರಾಷ್ಟ್ರ ರಾಜ್ಯವೊಂದರಿಂದಲೇ ಬಂದವರಾಗಿದ್ದಾರೆ. ಇನ್ನೂ ವಿದೇಶ, ಹೊರ ರಾಜ್ಯದಿಂದ ಬಂದ 59 ಜನರಲ್ಲಿ ಕೊರೊನಾ ಸೋಂಕು ಕಾಣಿಸಿದೆ. ಜಿಲ್ಲೆಗೆ ಇನ್ನೂ 7000 ಜನ ಬರಲಿದ್ದು, ಈಗಾಗಲೇ ಆ ಪ್ರಕ್ರಿಯೆ ಶುರುವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *