ಮೇಕ್ ಶಿಫ್ಟ್ ಆಸ್ಪತ್ರೆಗೆ ನಾಳೆ ಸಿಎಂ ಚಾಲನೆ

Public TV
2 Min Read

ದೊಡ್ಡಬಳ್ಳಾಪುರ: ಕೊರೊನಾ ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತಾಯಿ, ಮಗು ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿ 100 ಹಾಸಿಗೆಯ ಸುಸಜ್ಜಿತ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಜುಲೈ 7ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಉಸ್ತುವಾರಿ ಸಚಿವ ನಾಗರಾಜು(ಎಂ.ಟಿ.ಬಿ) ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಲೆನೊವೊ, ಗೋಲ್ಡ್ ಮ್ಯಾನ್ ಸ್ಯಾಚಸ್ ಕಂಪನಿಗಳು ತಮ್ಮ ಸಿ.ಎಸ್.ಆರ್ ನಿಧಿಯಡಿ ಒದಗಿಸಿರುವ ಅನುದಾನದಲ್ಲಿ ಮಾಡ್ಯುಲಸ್ ಸಂಸ್ಥೆಯವರು ಸಿದ್ಧಪಡಿಸಿರುವ ವಿನ್ಯಾಸದಂತೆ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣಗೊಂಡಿದೆ. ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಕ ಕಾರ್ಯಕರ್ತರ ವಲಯ, ಸ್ಕ್ರೀನಿಂಗ್ ಮತ್ತು ವೀಕ್ಷಣಾ ವಲಯ, ಪ್ರತ್ಯೇಕ ವಾರ್ಡ್ ವಲಯ, ಐಸಿಯು ವಾರ್ಡ್ ವಲಯ ಎಂದು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಈ ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ 70 ಆಕ್ಸಿಜನ್ ಬೆಡ್ ಗಳು, 20 ಐ.ಸಿ.ಯು (ತೀವ್ರ ನಿಗಾ ಘಟಕ)ಬೆಡ್ ಗಳು, 10 ವೆಂಟಿಲೇಟರ್ ಬೆಡ್ ಗಳು ಹಾಗೂ 2 ಕೆ.ಎಲ್. ಆಕ್ಸಿಜನ್ ಜನರೇಟರ್ ವ್ಯವಸ್ಥೆಯನ್ನು ಹೊಂದಿದೆ. ಈ ಆಸ್ಪತ್ರೆಯ ಲೇಔಟ್ ನಿರ್ಮಾಣ ಕಾಮಗಾರಿಯನ್ನು ದೊಡ್ಡಬಳ್ಳಾಪುರದ ಇಂಡೋ ಎಂಐಎಂ ಪ್ರೈವೇಟ್ ಲಿಮಿಟೆಡ್ ನಿರ್ವಹಿಸಿದೆ. ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ, ಅಮೆರಿಕನ್ ಇಂಡಿಯಾ ಫೌಂಡೇಶನ್ ಮತ್ತು ಯು.ಎನ್.ಡಿ.ಪಿ ಸಂಸ್ಥೆಗಳು ನಿರ್ವಹಿಸಿವೆ.

ಸುಸಜ್ಜಿತ ಎಲ್‍ಇಡಿ ಲೈಟ್‍ಗಳು 2×2 ಅಡಿ, 40 ವ್ಯಾಟ್ಸ್, ಕ್ಯಾಬಿನ್ ಫ್ಯಾನ್ ಗಳು, 12 ಇಂಚು-80 ವ್ಯಾಟ್ಸ್, ಎಕ್ಸಾಸ್ಟ್ ಫ್ಯಾನ್ ಗಳು 250 ಎಂಎಂ ಸ್ವೀಪ್ 25 ವ್ಯಾಟ್ಸ್, ಸಾಕೆಟ್ ಗಳು ಮತ್ತು ಪ್ಲಗ್ ಪಾಯಿಂಟ್ ಗಳು 5 ಆ್ಯಂಪ್ ಮತ್ತು 15 ಆ್ಯಂಪ್ (ವೈದ್ಯಕೀಯ ಉಪಕರಣಗಳ ಪ್ಲಗಿನ್), ವಿತರಣಾ ಬಾಕ್ಸ್- ಸಿಂಗಲ್ ಫೇಸ್ 32 ಆ್ಯಂಪ್-ಎಂಸಿಬಿ, ಎಸಿ ಪ್ಲಗ್ ಪಾಯಿಂಟ್ ಗಳ ಜೊತೆಗೆ 40 ಆ್ಯಂಪ್‍ಗಳು, ಎಸಿ ಸ್ಟೆಬಿಲೈಜರ್ ಗಳು ಇವೆ.

ವೆಸ್ಟರ್ನ್ ಕ್ಲೋಸೆಟ್- ಪ್ರತಿ ಶೌಚಾಲಯಕ್ಕೆ ತಲಾ 1, ವಾಶ್ ಬೇಸಿನ್ ತಲಾ 1, ಎಕ್ಸಾಸ್ಟ್ ಫ್ಯಾನ್‍ಗಳು 150 ಎಂಎಂ ಸ್ವೀಪ್, ಬಿಸಿ ಮತ್ತು ತಣ್ಣೀರು ಸೌಲಭ್ಯದ ಶವರ್ ಹೆಡ್‍ಗಳು, ಬಿಸಿ ನೀರಿನ ಗೀಸರ್- ತಲಾ 1 ಸೇರಿದಂತೆ ಶೌಚಾಲಯಗಳು ಮತ್ತು ಕೊಳಾಯಿ ವ್ಯವಸ್ಥೆಗಳ ಸೌಲಭ್ಯಗಳು ಇದರಲ್ಲಿವೆ.

30 ಎಂಪಿಸಿ ಗ್ರೇಡ್ ನೊಂದಿಗೆ ನೆಲಮಟ್ಟದಿಂದ 9 ಇಂಚಿನಷ್ಟು ಗಟ್ಟಿಯಾದ ಮಣ್ಣು ಪಿಸಿಸಿ ಬಳಕೆ, 15 ಅಡಿ ವ್ಯಾಪ್ತಿಯೊಳಗೆ ವಿದ್ಯುತ್ ಸಂಪರ್ಕ ಸೌಲಭ್ಯ, 15 ಅಡಿ ವ್ಯಾಪ್ತಿಯೊಳಗೆ ನೀರಿನ ಸಂಪರ್ಕ ಸೌಲಭ್ಯ, ಒಳಚರಂಡಿ ವ್ಯವಸ್ಥೆ, ತೆರೆದ ಮೈದಾನ, 40 ಎಫ್‍ಟಿ ಟ್ರೈಲರ್, 5ಟಿ ಕ್ರೇನ್ ಸುಲಭ ಚಲನೆಗೆ ಸ್ಥಳಾವಕಾಶ ಇರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *