ಮೃತ ಮಗನ ಫೋಟೋ ಇಟ್ಕೊಂಡು ಯುವರತ್ನ ಸಿನಿಮಾ ವೀಕ್ಷಣೆ

Public TV
1 Min Read

– ನಾಲ್ಕು ತಿಂಗಳ ಹಿಂದೆ ಪುತ್ರನ ಸಾವು
– ಮಗನ ಫೋಟೋಗೂ ಟಿಕೆಟ್ ಪಡೆದ ಕುಟುಂಬ

ಮೈಸೂರು: ನಾಲ್ಕು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಕುಟುಂಬ ಇಂದು ಮಗನ ಫೋಟೋ ಇಟ್ಟುಕೊಂಡೇ ಯುವರತ್ನ ಸಿನಿಮಾ ವೀಕ್ಷಿಸುವ ಮೂಲಕ ಗಮನ ಸೆಳೆದಿದೆ.

ನಗರದ ಮುರಳಿಧರ್ ಅವರ ಮಗ ಹರಿಕೃಷ್ಣನ್ ನಾಲ್ಕು ತಿಂಗಳ ಹಿಂದೆ ಅಕಾಲಿಕ ನಿಧನರಾದ್ದಾರೆ. ಹರಿಕೃಷ್ಣನ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಅಲ್ಲದೆ ಯುವರತ್ನ ಸಿನಿಮಾ ನೋಡಬೇಕೆಂದು ಮಹದಾಸೆಯಿಂದ ಕಾಯುತ್ತಿದ್ದ. ಆದರೆ ಯುವರತ್ನ ಸಿನಿಮಾ ರಿಲೀಸ್‍ಗೂ ಮುನ್ನ ಸಾವನಪ್ಪಿದ್ದಾರೆ.

ಈಜಲು ಹೋಗಿ ನೀರಲ್ಲಿ ಮುಳುಗಿ ಮಗ ಹರಿಕೃಷ್ಣನ್ ಸಾವನ್ನಪ್ಪಿದ್ದು, ಮಗನ ಆಸೆ ಈಡೇರಿಸುವ ಉದ್ದೇಶದಿಂದ ಇಂದು ಮಗನಫೋಟೋ ಇಟ್ಟುಕೊಂಡು ಕುಟುಂಬಸ್ಥರು ಸಿನಿಮಾ ವೀಕ್ಷಣೆ ಮಾಡಿದರು.

ಮೈಸೂರಿನ ಡಿಆರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ತಂದೆ, ತಾಯಿ, ಯುವಕನ ಅಣ್ಣ ಸಿನಿಮಾ ವೀಕ್ಷಣೆ ಮಾಡಿದರು. ಸಾವನ್ನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಆ ಸೀಟ್ ನಲ್ಲಿ ಮಗನ ಫೋಟೋ ಇಟ್ಟುಕೊಂಡು ಚಲನಚಿತ್ರ ವೀಕ್ಷಿಸಿದರು.

ಈಜಲು ಹೋಗಿ ನೀರಲ್ಲಿ ಮುಳುಗಿ ನಾಲ್ಕು ತಿಂಗಳ ಹಿಂದಷ್ಟೇ ನನ್ನ ಮಗ ತೀರಿಕೊಂಡ. ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್ ಆಗಿದ್ದ. ಪುನೀತ್ ಎಂದರೆ ಪ್ರಾಣ ಅವನಿಗೆ. ಇಂಧು ಸಿನಿಮಾ ನೋಡಲು ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಬರಲು ಇಷ್ಟವಿರಲಿಲ್ಲ. ಈಗಲೂ ನಮ್ಮ ಜೊತೆ ಇದ್ದಾನೆಂದು ನಮ್ಮ ಜೊತೆ ಕರೆದುಕೊಂಡು ಬಂದಿದ್ದೇವೆ. ಅವನಿಗೂ ಟಿಕೆಟ್ ತೆಗೆದುಕೊಂಡಿದ್ದೇವೆ. ಅವನೂ ನಮ್ಮ ಜೊತೆ ಸಿನಿಮಾ ನೋಡಿ ಸಂತೋಷ ಪಡಲೆಂದು ಜೊತೆಗೆ ಕರೆ ತಂದಿದ್ದೇವೆ ಎಂದು ಹೇಳಿ ಫೋಟೋ ತೋರಿಸಿ ತಂದೆ ಮುರುಳಿಧರ್ ಕಣ್ಣೀರು ಹಾಕಿದ್ದಾರೆ.

ಈ ಸಂದೇಶ ಪುನೀತ್ ಅವರಿಗೆ ತಲುಪಲಿ ಎಂದು ಅವನನ್ನು ಚಿತ್ರ ಮಂದಿರಕ್ಕೆ ಕರೆ ತಂದಿದ್ದೇವೆ. ಅವನ ಆತ್ಮಕ್ಕೆ ಶಾಂತಿ ಸಿಗಲೆಂದು ಪುನೀತ್ ರಾಜ್‍ಕುಮಾರ್ ಅವರು ಹಾರೈಸಿದರೆ ಸಾಕು ಎಂದು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *